ರಾಮನಗರ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಾಗಡಿ ತಾಲೂಕಿನ ಕುದೂರು ಹೋಬಳಿಯ ನೀರಸಾಗರ ಕೆರೆ ಏರಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸುಮಾರು 80 ಎಕರೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ.
ನೀರು ನುಗ್ಗಿದ ಪರಿಣಾಮ ರೈತರ ಬೆಳೆ ಸಂಪೂರ್ಣ ನಾಶವಾಗಿದ್ದು, ರಾಗಿ, ಭತ್ತ, ಜೋಳ ಸೇರಿದಂತೆ ತರಕಾರಿ ಬೆಳೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ.
ಸುಮಾರು 25 ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದ ಜಮೀನು ಸಂಪೂರ್ಣ ಜಲಾವೃತವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಈಗಾಗಲೇ ಹತ್ತಾರು ರೈತರ ಜಮೀನು ಜಲಾವೃತವಾಗಿದ್ದು, ಕೆರೆಯ ನೀರು ಮುಂದೆ ಹರಿದು ಪಕ್ಕದ ಗ್ರಾಮ ಶ್ರೀಗಿರಿಪುರದ ಕೆರೆಗೂ ಸೇರಲಿರುವ ಕಾರಣ ಅಲ್ಲಿನ ರೈತರೂ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.