ರಾಮನಗರ: ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಓಡಾಡ್ತಿದ್ದ ಚಿರತೆ ಇಂದು ಹಾಡಹಗಲೇ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಹೀಗೆ ಕಾಣಿಸಿಕೊಂಡ ಚಿರತೆ ಗಿಡಗಂಟಿ ಬೆಳೆದುಕೊಂಡಿದ್ದ ಪ್ರದೇಶದಲ್ಲಿ ಅವಿತುಕೊಂಡಿತ್ತು. ಅವಿತ ಚಿರತೆ ಸೆರೆ ಹಿಡಿಯುವಂತೆ ನಗರದ ಜನರು ಅರಣ್ಯ ಇಲಾಖೆಗೆ ಮನವಿ ಮಾಡಿದ್ರು. ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು 3 ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಎಂ.ಜಿ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಒಂದಲ್ಲ ಒಂದು ಜಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಸೋಮವಾರ ಮುಂಜಾನೆ 4.40ರ ಸುಮಾರಿನಲ್ಲಿ ನಗರದ ಎಂ.ಜಿ ರಸ್ತೆಯ ಈಶ್ವರ ದೇವಾಲಯದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡು ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಬಳಿಕ ಶುಕ್ರವಾರ ಕೂಡ ಕಾಣಿಸಿಕೊಂಡಿತ್ತು. ಅಲ್ಲದೇ ಇಂದು ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಈಶ್ವರ ದೇವಾಲಯದ ರಸ್ತೆಯಲ್ಲಿ ಮತ್ತೆ ಕಾಣಿಸಿಕೊಂಡಿತ್ತು.
ಹೀಗೆ ಕಾಣಿಸಿಕೊಂಡ ಚಿರತೆ ಅಲ್ಲೆ ಇದ್ದ ಖಾಲಿ ನಿವೇಶನಗಳ ಪೊದೆಯಲ್ಲಿ ಅವಿತು ಕೊಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ವಿಷಯ ತಿಳಿಸಿದ್ರು. ಸ್ಥಳಕ್ಕೆ ಬಲೆ ಹಾಗೂ ಬೋನಿನ ಸಮೇತ ಅಧಿಕಾರಿಗಳು ಆಗಮಿಸಿದ್ದರು. ಜತೆಗೆ ಬನ್ನೇರುಘಟ್ಟದಿಂದ ಅರಿವಳಿಕೆ ತಜ್ಞರನ್ನ ಸಹ ಕರೆಸಿಕೊಳ್ಳಲಾಗಿತ್ತು.
ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ:
ಜೆಸಿಬಿ ಬಳಸಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನ ಕಿತ್ತು ಹಾಕಿ, ಪಟಾಕಿ ಕೂಡ ಸಿಡಿಸಿದರು. ಆದರೂ ಚಿರತೆ ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಚಿರತೆ ಇಲ್ಲ ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ತೆರಳುವ ವೇಳೆ ಮೂಲೆಯ ಒಂದು ಪೊದೆಯಿಂದ ಚಿರತೆ ಹೊರ ಬಂದಿತು. ಮತ್ತೆ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಅರಿವಳಿಕೆ ತಜ್ಞರು ಚಿರತೆಗೆ ಅರಿವಳಿಕೆ ಚುಚ್ಚು ಮುದ್ದು ನೀಡಿ ಬಲೆ ಮೂಲಕ ಚಿರತೆಯನ್ನು ಸೆರೆ ಹಿಡಿದರು.
ಸುಮಾರು 5 ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಸದ್ಯ ಈ ಚಿರತೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನಲ್ಲಿ ಲಾಕ್ ಮಾಡಿದ್ದಾರೆ. ಸೆರೆ ಸಿಕ್ಕ ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿ ತದ ನಂತರ ಎಲ್ಲಿ ಬಿಡಬೇಕು ಎಂದು ತೀರ್ಮಾನಿಸಲಾಗುತ್ತದೆ ಎಂದು ಡಿಎಫ್ಓ ದೇವರಾಜ್ ತಿಳಿಸಿದರು.
ಒಟ್ಟಾರೆ ಕಳೆದ ಮೂರ್ನಾಲ್ಕು ದಿನಗಳಿಂದ ಚನ್ನಪಟ್ಟಣದ ನಗರದಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದರಿಂದ ನಗರದ ಜನತೆ ಸಮಧಾನದ ನಿಟ್ಟುಸಿರು ಬಿಡುವಂತಾಗಿದೆ.