ರಾಮನಗರ: ಮಂಗವೊಂದು ಶಾಲೆಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿದೆ. ಪರಿಣಾಮ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಕೈಲಾಂಚ ಹೋಬಳಿಯ ನಾಗೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. 10 ವರ್ಷದ ಲಿಖಿತಾ ಎಂಬ ಬಾಲಕಿ ಮಂಗ - ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಕೈಲಾಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ರಾಮನಗರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಏಕಾಏಕಿ ತರಗತಿ ಕೊಠಡಿಗೆ ಮಂಗ ನುಗ್ಗಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಬಾಲಕಿಯ ಕೈ, ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು, ಶಾಲಾ ಕೊಠಡಿ ತುಂಬೆಲ್ಲ ರಕ್ತ ಹರಿದಿದೆ ಎಂದು ತಿಳಿದು ಬಂದಿದೆ.
ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು:
ಇದೇ ಮಂಗ ಗ್ರಾಮದಲ್ಲಿ ಇತ್ತೀಚಿಗೆ ಇಬ್ಬರು ಬಾಲಕರಿಗೆ ಕಚ್ಚಿತ್ತು. ಇಂದು ಬಾಲಕಿ ಮೇಲೆ ಮಂಗ ದಾಳಿ ನಡೆಸಿದ್ದು, ಗಾಯಗೊಳಿಸಿದೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಯೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಮಂಗನನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನನ್ನೂ ಓದಿ: ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ಹಣ.. ದೇವರ ಮೇಲೆ ಆಣೆ ಪ್ರಮಾಣ- ವಿಡಿಯೋ