ಲಿಂಗಸುಗೂರು : ಜಿಲ್ಲೆಯ ಮಸ್ಕಿ ತಾಲ್ಲೂಕು ಸಂತೆ ಕೆಲ್ಲೂರು ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಅವರ ಮರು ನೇಮಕಾತಿ ರದ್ದುಪಡಿಸುವಂತೆ ಕೂಲಿ ಕಾರ್ಮಿಕರು, ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.
2015-16 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಗಳ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಹಣ ದುರ್ಬಳಕೆ ಬಗ್ಗೆ ದೂರು ಸಲ್ಲಿಸಲಾಗಿತ್ತು. ಇಲಾಖೆಯ ತನಿಖೆಯಲ್ಲಿ ಹಣ ದುರ್ಬಳಕೆ ಧೃಡಪಟ್ಟಿದ್ದರಿಂದ ಕಂಪ್ಯೂಟರ್ ಆಪರೇಟರ ಬುಡನ್ ಸಾಬ ಅವರನ್ನು ಸೇವೆಯಿಂದ ತೆಗೆದು ಹಾಕಲಾಗಿತ್ತು.
ಕಂಪ್ಯೂಟರ್ ಆಪರೇಟರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇವರ ವಿರುದ್ಧ ಅಗತ್ಯ ದಾಖಲೆ ಸಲ್ಲಿಸದೇ ಹೋಗಿದ್ದರಿಂದ ಪುನಃ ನೇಮಕ ಮಾಡಿಕೊಳ್ಳಲು ಆದೇಶ ನೀಡಿದ್ದರು. ಇದೀಗ ಅದೇ ವ್ಯಕ್ತಿಯು ತಮ್ಮ ಪಂಚಾಯಿತಿಗೆ ನೇಮಕವಾಗುವುದು ಬೇಡವೆಂದು ಕೂಲಿ ಕಾರ್ಮಿಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಆಗ್ರಹಪಡಿಸಿದ್ದಾರೆ.
ಕೂಲಿಕಾರರು, ಸದಸ್ಯರು ಮೇಲಿಂದ ಮೇಲೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಕೂಡ, ಉದ್ದೇಶಪೂರ್ವಕವಾಗಿ ಮತ್ತೆ ಅದೇ ವ್ಯಕ್ತಿಯನ್ನು ಸಂತೆಕೆಲ್ಲೂರು ಕಂಪ್ಯೂಟರ್ ಆಪರೇಟರ್ ಅಂತ ನಿಯೋಜಿಸಿದ್ದನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.