ರಾಯಚೂರು: ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಆ್ಯಂಬುಲೆನ್ಸ್‌ನಲ್ಲೇ ಗರ್ಭಿಣಿಯೋರ್ವಳು ಮಗುವಿಗೆ ಜನ್ಮ ನೀಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಬಿ.ಆರ್.ಬಿ. ಸರ್ಕಲ್ ಬಳಿ ಆರೋಗ್ಯ ಕವಚದ ಸಿಬ್ಬಂದಿ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿದ್ದಾರೆ.
ತಾಲೂಕಿನ ಮಂಜರಲ್ ಗ್ರಾಮದಿಂದ ಚಿಕಿತ್ಸೆಗಾಗಿ ರಿಮ್ಸ್ಗೆ ರವಾನಿಸುವ ವೇಳೆ ಮಾರ್ಗ ಮಧ್ಯ ಹೆರಿಗೆಯಾಗಿದೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಗರ್ಭಿಣಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆಯನ್ನ ಆ್ಯಂಬುಲೆನ್ಸ್‌ನಲ್ಲಿ ಕರೆ ತರಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಆರೋಗ್ಯ ಕವಚದ ಸಿಬ್ಬಂದಿ ಭೀಮರಾಯ, ವಾಹನ ಚಾಲಕ ಭೀಮಸೇನರಾವ್ ಗರ್ಭಿಣಿ ಮಹಿಳೆಯ ಕುಟುಂಬದವರ ಸಹಕಾರದೊಂದಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗುವನ್ನು ಇದೀಗ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಗರ್ಭಿಣಿಗೆ ಇತ್ತೀಚೆಗೆ ಕೊರೊನಾ ಸೋಂಕು ಹರಡಿತ್ತು. ಆಗ ಗರ್ಭಿಣಿಯನ್ನು ಯರಮರಸ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆ ಆಕೆಯನ್ನು ಮನೆಗೆ ಕಳುಹಿಸಿ ಹೋಂ ಐಸೋಲೇಷನ್ನಲ್ಲಿ ಇರಿಸಲಾಗಿತ್ತು. ಇಂದು ನೋವು ಕಾಣಿಸಿಕೊಂಡಿದ್ದರಿಂದ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿತ್ತು.