ರಾಯಚೂರು: ಪತಿ ಹಾಗೂ ಅತ್ತೆ-ಮಾವನ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ತನ್ನ 14 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಆರೋಲಿ ಗ್ರಾಮದಲ್ಲಿ ನಡೆದಿದೆ.
ಹನುಮತಿ ಹುಲಿಗೆಯ್ಯ(26), ಉದಯ(14 ತಿಂಗಳು) ಮೃತರು. ರಾಯಚೂರು ತಾಲೂಕಿನ ಮಟಮಾರಿ ಗ್ರಾಮದ ಮೂಲದ ಹನುಮತಿ ಅವರನ್ನು ಆರೋಲಿ ಗ್ರಾಮದ ಹುಲಿಗೆಯ್ಯ ಎಂಬಾತನೊಂದಿಗೆ ಕಳೆದ 7 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಚೆನ್ನಾಗಿಯೇ ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಪತಿ ಹಾಗೂ ಅತ್ತೆ, ಮಾವ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಇದನ್ನು ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ.
ಹನುಮತಿ ಹಾಗೂ ಆಕೆಯ ಮಗ ಶುಕ್ರವಾರದಿಂದ ಕಾಣೆಯಾಗಿದ್ದರು. ಕಾಣೆಯಾದ ಕುರಿತಂತೆ ಸೋಮವಾರ ಮಾನ್ವಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಆಧಾರ ಮೇಲೆ ತನಿಖೆ ನಡೆಸುವ ವೇಳೆ ಇಂದು ಗ್ರಾಮದ ಬಾವಿಯಲ್ಲಿ ಇಬ್ಬರ ಶವ ಪತ್ತೆಯಾಗಿವೆ. ಸದ್ಯ ಶವಗಳನ್ನ ಬಾವಿಯಿಂದ ಹೊರ ತೆಗೆಯಲಾಗಿದೆ.
ಈ ಸಂಬಂಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.