ರಾಯಚೂರು: ಜಿಲ್ಲಾದ್ಯಂತ ನಿತ್ಯ ನೂರಾರು ಸಾರಿಗೆ ಬಸ್ಗಳು ಸಂಚರಿಸುತ್ತಿದ್ದವು. ಆದ್ರೆ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಗಳು ಸಂಚರಿಸುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 7 ಬಸ್ ಡಿಪೋಗಳಿವೆ. ಎಲ್ಲ ಡಿಪೋಗಳಿಂದ ಜಿಲ್ಲೆ ಹಾಗೂ ಅಂತರ್ ಜಿಲ್ಲೆಗಳಿಗೆ ಒಟ್ಟು 576 ಬಸ್ಗಳು ಓಡಾಡುತ್ತವೆ. ಕರ್ಫ್ಯೂ ಹಿನ್ನೆಲೆ ಬೆಳಗ್ಗೆಯಿಂದ 9:30 ರವರೆಗೆ ಕೇವಲ 57 ಬಸ್ಗಳು ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸುತ್ತಿವೆ. ಜತೆಗೆ ಜನರಿಲ್ಲದೇ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಮುಂಗಡವಾಗಿ ಬುಕ್ ಮಾಡಿ ಪ್ರಯಾಣಿಸಲು ಸಂಚರಿಸುವ ಯಾವುದೇ ಬಸ್ ಸಂಚಾರಕ್ಕೆ ಅಡ್ಡಿಯಿಲ್ಲ. ಕರ್ಫ್ಯೂನಿಂದಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವೀಕೆಂಡ್ ಕರ್ಫ್ಯೂ ಹಿನ್ನೆಲೆ ಜಿಲ್ಲಾದ್ಯಂತ ಅಗತ್ಯ ವಸ್ತುಗಳು, ತುರ್ತು ಸೇವೆ ಹೊರತು ಪಡಿಸಿದಂತೆ ಉಳಿದೆಲ್ಲ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ನಗರದಲ್ಲಿ ನಾನಾ ಕಡೆಗಳಿಗೆ ಬ್ಯಾರಿಕೇಡ್ ಹಾಕಿರುವ ಪೊಲೀಸರು, ಅನಗತ್ಯ ಓಡಾಟ ಮಾಡುವವರನ್ನು ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ.
ನಿತ್ಯ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥರು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿದ್ದು, ದಿನಂಪ್ರತಿ ನಡೆಯುವ ಹಾಗೆ ವ್ಯಾಪಾರ ನಡೆಯದೇ ಇರುವುದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ. ಸದ್ಯ ಜಿಲ್ಲಾದ್ಯಂತ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದು, ಅಗತ್ಯ ಬಂದೋ ಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Weekend Curfew: ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿವೆ ಬೆಂಗಳೂರಿನ ರಸ್ತೆಗಳು.. ಉಲ್ಲಂಘಿಸಿದರೆ ಕಟ್ಟನಿಟ್ಟಿನ ಕ್ರಮ