ರಾಯಚೂರು: ನಾರಾಯಣಪುರ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದು ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿ ಬೀಡಲಾಗುತ್ತಿದೆ. ಇದರಿಂದಾಗಿ ಜಲಾನಯನ ಕೆಳಭಾಗದ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಸೇರಿದಂತೆ ರಾಯಚೂರು ತಾಲೂಕಿನಲ್ಲೂ ಪ್ರವಾಹ ಭೀತಿ ಶುರುವಾಗಿದೆ. ಜಲಾಶಯದಿಂದ ಇಂದು ಬೆಳಿಗ್ಗೆ 8 ಗಂಟೆ ಸಮಯಕ್ಕೆ 2.20 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 25 ಗೇಟ್ ಗಳ ಮೂಲಕ 2.59 ಕ್ಯೂಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ಪರಿಣಾಮ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ದೇವದುರ್ಗ ತಾಲೂಕಿನ ಹೂವಿನಹೆಗಡಿ ಸೇತುವೆ ಜಲಾವೃತ್ತವಾಗಿದೆ.
ಇನ್ನೂ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಇರುವ ಶ್ರೀ ಅಲ್ಲಮಪ್ರಭು ದೇಗುಲ, ಕೊಪ್ಪರ ಶ್ರೀಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಜಲಕಂಟಕ ಉಂಟಾಗಿದೆ. ನದಿ ತೀರದಲ್ಲಿನ ಗ್ರಾಮಗಳಿಗೆ ಪ್ರವಾಹ ಭೀತಿ ತಲೆದೂರಿ ಜನ, ಜಾನುವಾರಗಳನ್ನು ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸದ್ಯ ನದಿ ಪಾತ್ರದಲ್ಲಿರುವ ಹೊಲ-ಗದ್ದೆಗಳಿಗೆ ನೀರು ನುಗ್ಗುವ ಭೀತಿಯಿಂದ ಬೆಳೆ ಹಾನಿಯಾಗುವ ಸಾಧ್ಯತೆಯಿದೆ.
ಇನ್ನೂ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸತತವಾಗಿ ಜಿಟಿ-ಜಿಟಿ ಮಳೆ ಸುರಿಯುತ್ತಿರುವುದು ಪ್ರಹಾವ ಭೀತಿಯನ್ನ ಹೆಚ್ಚಿಸಿದೆ. ಜಲಾಶಯದ ಒಳಹರಿವು ಹೆಚ್ಚಳದಿಂದ ನೀರಿನ ಪ್ರಮಾಣದಲ್ಲಿ ಏರಿಳಿತವಾಗುತ್ತಿದೆ. ಇಂದು ಬೆಳಗ್ಗೆ 10:30 ರವರೆಗೆ 2.80 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಡುವ ಸಾಧ್ಯತೆಯಿದ್ದು, ಜಿಲ್ಲೆಯ ಜನತೆಗೆ ಪ್ರವಾಹ ಪಜೀತಿ ಉಂಟುಮಾಡಿದೆ.