ರಾಯಚೂರು : ಪ್ರವಾಹದಿಂದ ನಲುಗಿದ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಿಗೆ ಸೂರು ಕಲ್ಪಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಹತ್ತು ವರ್ಷಗಳಿಂದ ಸರ್ಕಾರ ವಿಫಲವಾಗಿದೆ. ಅಲ್ಲಿಯೇ ಶೆಡ್ಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು, ನಮಗೆ ಸುಸಜ್ಜಿತ ಸೂರು ಒದಗಿಸಿ ಕೊಡಿ ಎಂದು ಗೋಗರೆಯುತ್ತಿದ್ದರೂ ಸರ್ಕಾರ ಮಾತ್ರ ಆ ಕಡೆ ಕಿವಿಕೊಟ್ಟಿಲ್ಲ.
ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮ 2009ರಲ್ಲಿ ಅಪ್ಪಳಿಸಿದ ನೆರೆಗೆ ತುತ್ತಾಯಿತು. ಅದಾದ ಬಳಿಕ ಗ್ರಾಮವನ್ನ ಸ್ಥಳಾಂತರಿಸಬೇಕು ಎಂಬ ದೃಷ್ಟಿಯಿಂದ ಗ್ರಾಮದ ಹೊರವಲಯದಲ್ಲಿ 3 ಎಕರೆ ಜಮೀನನಲ್ಲಿ ನೂರಾರು ಮನೆಗಳನ್ನು ಆಶ್ರಯ ಯೋಜನೆಯಡಿ ಸರ್ಕಾರ ನಿರ್ಮಿಸಿದೆ. ಆದರೆ, ಮನೆಗಳು ಪಾಳು ಬಿದ್ದಿವೆ. ವಾಸಕ್ಕೆ ಯೋಗ್ಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮನೆಗಳ ಸುತ್ತಲೂ ಜಾಲಿಮರ ಬೆಳೆದಿದ್ದು, ಅನೈರ್ಮಲ್ಯದ ವಾತಾವರಣ ಇದೆ. ಮನೆ ಬಾಗಿಲು, ಕಿಟಿಕಿಗಳು ಮುರಿದಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಆದ್ದರಿಂದ ಸಂತ್ರಸ್ತರು ಈ ಮನೆಗಳಿಗೆ ಹೋಗಲು ಹಿಂದೇಟು ಹಾಕಿದರು.
ಆಗ ಸರ್ಕಾರ ಸರಿಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೂ ಅದು ಭರವಸೆಯಾಗಿಯೇ ಉಳಿದುಕೊಂಡಿದೆ. ಕಳೆದ ವರ್ಷದ ಉಂಟಾದ ಪ್ರವಾಹಕ್ಕೆ ಗ್ರಾಮದೊಳಗೆ ನೀರು ನುಗ್ಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
ಆಗ ಜಿಲ್ಲಾಡಳಿತ ಗ್ರಾಮಸ್ಥರನ್ನು ಗಂಜಿ ಕೇಂದ್ರದಲ್ಲಿ ಇರಿಸಿತು. ನೆರೆ ಹಾವಳಿ ವೀಕ್ಷಿಸಲು ಬಂದ ಸಚಿವ ಬಿ ಶ್ರೀರಾಮುಲು ಅವರು ಪುನರ್ವಸತಿ ಕೇಂದ್ರವನ್ನು ಸರಿಪಡಿಸುವ ಮೂಲಕ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ್ದ ಮಾತು ಕೂಡ ಮಾತಾಗಿಯೇ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು. ಮತ್ತೊಮ್ಮೆ ಪ್ರವಾಹ ಬರುವ ಮುನ್ನವೇ ನಮಗೆ ನಿವೇಶನ ಹಂಚಿಕೆ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.