ರಾಯಚೂರು: ಈಗಿನ ರಾಜಕಾರಣಿಗಳು ಹೆಲಿಕ್ಯಾಪ್ಟರ್ ರಾಜಕಾರಣಿಗಳಾಗಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಜನರು ತತ್ತರಿಸಿದ್ದಾರೆ. ಇವರ ಕಷ್ಟವನ್ನ ಆಲಿಸಲು ಸ್ಥಳಕ್ಕೆ ಧಾವಿಸಬೇಕು. ಆದ್ರೆ, ಸಿಎಂ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿ, ಹೆಲಿಕ್ಯಾಪ್ಟರ್ನಲ್ಲಿ ಬಂದು ಹೋಗುತ್ತಿದ್ದು, ಈ ಭಾಗದ ಜನರ ಸಂಕಷ್ಟದ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಸಿಎಂ ವೈಮಾನಿಕ ಸಮೀಕ್ಷೆ ಅಂತಾ ಹೆಲಿಕ್ಯಾಪ್ಟರ್ ಹಾರಾಟ ಮಾಡಿದರೆ, ಇನ್ನುಳಿದ ಜೆಡಿಎಸ್, ಕಾಂಗ್ರೆಸ್ ನಾಯಕರು ಸಹ ಹೆಲಿಕ್ಯಾಪ್ಟರ್ನಲ್ಲಿ ಹಾರಾಡುತ್ತಿದ್ದು, ಯಾರೂ ಜನರ ಬಳಿ ಬರುತ್ತಿಲ್ಲ. ಹೆಲಿಕ್ಯಾಪ್ಟರ್ ಹಾರಾಟದಿಂದ ಜನರ ಸಮಸ್ಯೆ ನೋಡುತ್ತೇನೆ ಎನ್ನುವುದು ಅಗೌರ ಎಂದರು.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಜಿಲ್ಲೆಗಳ ಜನರು ನೀರಿನಲ್ಲಿ ಮುಳಗಿ ಹೋಗಿ, ರೈತರ ಬೆಳೆ ಹಾನಿ ಸಂಭವಿಸಿ, ಮನೆಗಳು ಕಳೆದುಕೊಂಡಿದ್ದಾರೆ. ಹೀಗಾಗಿ, ಜನರ ಸಮಸ್ಯೆಯನ್ನ ನೇರವಾಗಿ ಆಗಮಿಸಿ ಕೇಳದೆ ಎಲ್ಲೋ ಕುಳಿತುಕೊಂಡು ಸಭೆ ನಡೆಸಿ ಹೋದರೆ ಸಮಸ್ಯೆ ಗೊತ್ತಾಗುವುದಿಲ್ಲ ಎಂದು ಸಿಎಂ ವೈಮಾನಿಕ ಸಮೀಕ್ಷೆಯನ್ನು ಆಕ್ಷೇಪಿಸಿದ್ರು.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶಕ್ಕೆ, ತೆಲಂಗಾಣ, ಆಂಧ್ರ, ತಮಿಳುನಾಡು ರಾಜ್ಯಗಳಿಗೆ ಹೋಗುತ್ತಾರೆ. ಆದ್ರೆ, ಕರ್ನಾಟಕಕ್ಕೆ ಬರುತ್ತಿಲ್ಲ. ನಮ್ಮ ರಾಜ್ಯಕ್ಕೆ ಯಾಕೆ ಬರುತ್ತಿಲ್ಲವೆಂದು ರಾಜ್ಯದ ಸಂಸದರು, ಕೇಂದ್ರ ಸಚಿವರೊಬ್ಬರೂ ಮಾತನಾಡುತ್ತಿಲ್ಲ. ಪ್ರಧಾನಿ ಈ ನಡೆಯಿಂದ ಪ್ರಧಾನಿ ಕರ್ನಾಟಕವನ್ನ ಗುಲಾಮರಂತೆ ಕಾಣುತ್ತಿದ್ದಾರೆ.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿಯಿಂದ ಹಾನಿ ಸಂಭವಿಸಿ, ಜನರು ಸಂಕಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ ಪ್ರಧಾನಿ ಗಮನ ಹರಿಸುತ್ತಿಲ್ಲ, ರಾಜ್ಯಕ್ಕೆ ಅನುದಾನ ಸಹ ನೀಡುತ್ತಿಲ್ಲ ಎಂದು ಪ್ರಧಾನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ನಾನು ಈಶಾನ್ಯ ಪದವೀಧರರ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಸ್ಪರ್ಧೆ ಮಾಡಿದ್ದು, ನನ್ನ ಬೆಂಬಲಿಸಿ ಗೆಲ್ಲಿಸಿದ್ದರೆ, ಶಿಕ್ಷಕರಿಗಾಗಿ ಹೋರಾಟ ನಡೆಸುವುದಾಗಿ ಹೇಳಿದ್ರು.
ವಾಟಾಳ್ ನಾಗರಾಜ ಅವರನ್ನ ಡಿಸಿ ಕಚೇರಿ ಮುಂಭಾಗದಲ್ಲಿ ಪೊಲೀಸರು ತಡೆದರು. ಇದರಿಂದ ಪೊಲೀಸರು ಹಾಗೂ ವಾಟಾಳ್ ನಾಗರಾಜ ಮಧ್ಯೆ ಮಾತಿನ ಚಕಮಕಿ ನಡೆಯಿತು.