ರಾಯಚೂರು: ಲಿಂಗಸುಗೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಸಹಾಯಕ ಆಯುಕ್ತ ಕಚೇರಿ ತಹಶೀಲ್ದಾರ ಶಾಲಂಸಾಬ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಸಂಕಷ್ಟ ತಂದೊಡ್ಡುತ್ತಿದೆ. ಈ ಮಧ್ಯೆ ಕೋವಿಡ್ ಅಟ್ಟಹಾಸದಿಂದ ರೈತರು, ಕಾರ್ಮಿಕರು, ಬಡವ, ಕೂಲಿಕಾರ, ಅಸಂಘಟಿತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಉಚಿತ ಮತ್ತು ಸುರಕ್ಷಿತ ಚಿಕಿತ್ಸೆ ಎಲ್ಲರಿಗೂ ಸಿಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿಯಲ್ಲಿ ಕನಿಷ್ಠ 200 ದಿನ ಕೆಲಸ, ರೂ. 600 ಕೂಲಿ ನೀಡಬೇಕು. ನಿರುದ್ಯೋಗಿಗಳಿಗೆ ರೂ 10 ಸಾವಿರ ರೂ. ಮಾಸಾಶನ ವಿತರಿಸಬೇಕು. ಖಾಸಗೀಕರಣ ಕೈಬಿಟ್ಟು ಲಾಕ್‌ಡೌನ್ ಅವಧಿಯ ವೇತನ ಕಾರ್ಮಿಕರಿಗೆ ಸಿಗುವಂತೆ ಆದೇಶಿಸುವ ಜೊತೆಗೆ ವಿವಿಧ ಬೇಡಿಕೆ ಈಡೇರಿಸಬೇಕೆಂದರು.