ರಾಯಚೂರು: ವಾಲ್ಮೀಕಿ ನಿಗಮದ ರಾಯಚೂರು ಜಿಲ್ಲಾ ವ್ಯವಸ್ಥಾಪಕ ವೈ.ಎ. ಕಾಳೆ ಅವರನ್ನ ಅಮಾನತು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಡಿಸಿಎಂ ಗೋವಿಂದ ಕಾರಜೋಳ ಆದೇಶಿಸಿದ್ರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಆದೇಶವನ್ನ ಮಾಡಿದ್ದಾರೆ. ಭೂ ಒಡೆತನ ಯೋಜನೆಯಲ್ಲಿ 3800ಕ್ಕೂ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಲ್ಲಿಕೆಯಾಗಿದ್ದ ಅರ್ಜಿಗಳು ವಿಲೇವಾರಿ ಮಾಡಿ ಕ್ರಮ ಕೈಗೊಳ್ಳದೇ ವಿಳಂಬ ಮಾಡಿರುವುದಕ್ಕೆ ಗರಂ ಆದ ಡಿಸಿಎಂ ಕೂಡಲೇ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ವೈ.ಎ. ಕಾಳೆ ಅವರನ್ನ ಅಮಾನತುಗೊಳಿಸುವಂತೆ ತಿಳಿಸಿದರು, ಆದೇಶ ಪ್ರತಿಯನ್ನ ಸಂಜೆಯೊಳಗೆ ತಲುಪಿಸುವಂತೆ ಸೂಚಿಸಿದ್ರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸ್ಥಿತಿ ನೋಡಿದ್ರೆ ಜೀವಂತ ಇಲ್ಲವೆನ್ನುವಂತೆ ಆಗಿದೆ. ದಾಖಲೆಗಳು ಸಂಗ್ರಹಿಸಲು ಎಷ್ಟು ವರ್ಷ ಬೇಕು? ಅಥವಾ ದಾಖಲೆಗಳು ನೀಡಲು ಅಂಬೇಡ್ಕರ್ ಮತ್ತೊಮ್ಮೆ ಹುಟ್ಟಿ ಬರಬೇಕಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ರು. ಲೋಕೋಪಯೋಗಿ ಇಲಾಖೆಯಿಂದ ಇರುವ ನಿಗದಿತ ಗುರಿಯನ್ನ ಸಾಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರಗತಿ ಪರಿಶೀಲನೆ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನೆರೆ ಹಾವಳಿ ಸಂಬಂಧಿತ ಕಾಮಗಾರಿ ನಿರ್ವಹಿಸಲು ಕೆಲ ಸಮಸ್ಯೆಯಿರುವ ಕಾರಣ ಕೆಲವು ಪ್ರದೇಶದಲ್ಲಿ ಭೌತಿಕ ಗುರಿ ತಲುಪಲು ಕ್ರಮಗಳು ಅಧಿಕಾರಿಗಳಿಗೆ ಆದೇಶಿಸಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ 755 ಕೋಟಿ ರೂಪಾಯಿ ವೆಚ್ಚದ 154 ಕಾಮಗಾರಿಗಳು, ಕೈಗೆತ್ತಿಕೊಳ್ಳಲಾಗಿದ್ದು, 52 ಕಾಮಗಾರಿ ಮುಗಿದಿದೆ. 68 ಕಾಮಗಾರಿ ಪ್ರಗತಿ ಹಂತದಲ್ಲಿವೆಯೆಂದು ತಿಳಿಸಿದರು.