ರಾಯಚೂರು: ನಗರವಾಸಿಗಳಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದ ವಾರದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಉತ್ತರ ಕರ್ನಾಟಕ ನಗರ ವಲಯದ ಹೂಡಿಕೆ ಕಾರ್ಯಕ್ರಮ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (KUIDFC) ಆರ್ಥಿಕ ಸಹಾಯದಡಿ ನವದೆಹಲಿ ಮೂಲದ ಎಸ್ಪಿಎಂ ಕಂಪನಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಹೊಣೆ ವಹಿಸಲಾಯಿತು. ನಿಗದಿತ ಅವಧಿಯಂತೆ 2017ರಲ್ಲಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈವರೆಗೆ ಕಾಮಗಾರಿ ಕುಂಟುತ್ತಲೇ ಸಾಗುತ್ತಿದೆ.
ನಗರಕ್ಕೆ ನಿತ್ಯ 40 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಅವಶ್ಯಕತೆ ಇದ್ದು, ನದಿಗಳಿಂದ ಪೈಪ್ಲೈನ್ ಮೂಲಕ ಪೂರೈಸಲಾಗುತ್ತಿದೆ. ನಗರದಲ್ಲಿ ಅಧಿಕೃತವಾಗಿ ಒಟ್ಟು 22,997 ನಳಗಳ ಸಂಪರ್ಕವಿದೆ. ಅದರಲ್ಲಿ 22,587 ಮನೆಗಳಿಗೆ, 123 ವ್ಯಾಪಾರ-ವಾಣಿಜ್ಯ, 87 ಕೈಗಾರಿಕೆಗಳಿಗೆ, 200 ಗೃಹ ಬಳಕೆಯಲ್ಲದ ಜತೆಗೆ 5,146 ಸಾರ್ವಜನಿಕ ನಳ ಅಳವಡಿಕೆ ಮಾಡಲಾಗಿದೆ.
ಈ ಯೋಜನೆಯಡಿ 37 ಸಾವಿರ ಮನೆಗಳಿಗೆ ಮೀಟರ್ ಅಳವಡಿಕೆ ಗುರಿ ಹೊಂದಲಾಗಿದ್ದು, ಈವರೆಗೂ 32,459 ಮೀಟರ್ ಮಾತ್ರ ಅಳವಡಿಸಲಾಗಿದೆ. ಇನ್ನು ಕೆಲವೆಡೆ ಅಳವಡಿಸಿರುವ ಮೀಟರ್ಗಳು ಮಾಯವಾಗಿವೆ. ನದಿ ಬಳಿ ಜಾಕ್ವೆಲ್ ಅಳವಡಿಕೆ, ನದಿ ಮೂಲಕ ನಗರಕ್ಕೆ ಪೈಪ್ಲೈನ್, ಟ್ಯಾಂಕ್ಗಳ ನಿರ್ಮಾಣ, ಮೀಟರ್ ಅಳವಡಿಕೆಗೆ ₹79.93 ಕೋಟಿ ಹಾಗೂ ಒಎಂಡಿ ಕಾರ್ಯಾಚರಣೆಗಾಗಿ ₹38.02 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ. ಕೃಷ್ಣದೇವರಾಯ ಕಾಲೋನಿಯಲ್ಲಿ ಯೋಜನೆ ಪೂರ್ಣಗೊಂಡಿದ್ದು, ಉಳಿದ ಬಡಾವಣೆಗಳಲ್ಲಿ ಹಂತ ಹಂತವಾಗಿ ಮುಗಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ವಾಣಿಜ್ಯ ಮಳಿಗೆ, ಹೋಟೆಲ್, ಬಾರ್ & ರೆಸ್ಟೋರೆಂಟ್, ಕಾರ್ಖಾನೆಗಳು ಹಾಗೂ ನಾನಾ ಬಡಾವಣೆಗಳಲ್ಲಿ ಅಕ್ರಮ ನಳ ಅಳವಡಿಸಿಕೊಂಡಿರುವ ಆರೋಪವಿದೆ. ಆದರೆ ಈ ಕುರಿತು ದೂರು ನೀಡಿದ್ದರೂ ನಗರಸಭೆ ಕ್ರಮಕ್ಕೆ ಮುಂದಾಗಿಲ್ಲವಂತೆ. ಇದರಿಂದಾಗಿಯೂ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ನಗರ ನಿವಾಸಿಗಳು ಹೇಳುತ್ತಾರೆ.