ರಾಯಚೂರು: ಕುಡಿಯುವ ಓವರ್‌ಹೆಡ್ ಟ್ಯಾಂಕ್‌ನೊಳಗೆ 2 ಕೋತಿಗಳು ಬಿದ್ದು ಸತ್ತಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಂದು ಟ್ಯಾಂಕ್ ಸ್ವಚ್ಚಗೊಳಿಸಲು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಕೋತಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಇದೇ ಟ್ಯಾಂಕ್ನಿಂದ ಇಷ್ಟು ದಿನ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಇಂದು ಮುಂಜಾನೆ ಟ್ಯಾಂಕ್ ಸ್ವಚ್ಛತೆಗೆ ಮುಂದಾದಾಗ ಕೋತಿಗಳು ಸತ್ತು ಬಿದ್ದಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಕೋತಿಗಳ ಕಳೇಬರವನ್ನು ಹೊರತೆಗೆಯಲಾಗಿದೆ. ತಿಂಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ಹಲವರು ಸಾವಿಗೀಡಾದ ಪ್ರಕರಣ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು.
ನೀರು ಕುಡಿಯಲು ಟ್ಯಾಂಕ್‌ನೊಳಗಡೆ ಹೋದಾಗ ಕೋತಿಗಳು ಬಿದ್ದು ಮೇಲೆ ಬರಲಾರದೆ ಮೃತಪಟ್ಟಿರುವ ಅನಮಾನವಿದೆ. ಇದೇ ನೀರು ಸೇವಿಸಿದ ಗ್ರಾಮಸ್ಥರು ಆತಂಕಗೊಂಡಿದ್ದು, ಸದ್ಯದ ಮಟ್ಟಿಗೆ ಯಾರಿಗೂ ಯಾವುದೇ ರೀತಿಯ ಆರೋಗ್ಯ ಏರುಪೇರಾಗಿರುವ ವರದಿಯಾಗಿಲ್ಲ. ಹೀಗಿದ್ದರೂ ಟ್ಯಾಂಕ್ ನೀರು ಕುಡಿದ ಜನರಲ್ಲಿ ಆತಂಕದ ಛಾಯೆಯಿದೆ.
ಇದನ್ನೂ ಓದಿ: ರಾಯಚೂರಲ್ಲಿ ಮಹಿಳೆಯಿಂದ ಒಂದು ಲಕ್ಷ ರೂಪಾಯಿ ದೋಚಿ ಪರಾರಿಯಾದ ಖದೀಮರು: ವಿಡಿಯೋ
ಹಲ್ಲಿ ಬಿದ್ದ ಉಪ್ಪಿಟ್ಟು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ ಬಿದ್ದು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಓರ್ವ ಅಧಿಕಾರಿ ಮತ್ತು ಮುಖ್ಯ ಗುರುಗಳನ್ನು ಅಮಾನತುಗೊಳಿಸಿದ ಘಟನೆ ಇತ್ತೀಚೆಗೆ ರಾಯಚೂರಿನಲ್ಲಿ ನಡೆದಿತ್ತು. ರಾಯಚೂರು ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಜುಲೈ 1ರಂದು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಉಪ್ಪಿಟ್ಟು ಮಾಡಲಾಗಿತ್ತು. ಹಲ್ಲಿ ಬಿದ್ದ ಉಪ್ಪಿಟ್ಟು ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ತಸ್ಥಗೊಂಡಿದ್ದರು. ವಿದ್ಯಾರ್ಥಿಗಳನ್ನು ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು.
ಬೇಜವಾಬ್ದಾರಿ ಹಾಗೂ ಕರ್ತ್ಯವಲೋಪ ಎಸಗಿದ ಆರೋಪದ ಮೇಲೆ ರಾಯಚೂರು ತಾಲೂಕು ಪಂಚಾಯಿತ್‌ನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಮಂಜುಳಾ ಮತ್ತು ಅಪ್ಪನದೊಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕನಕಪ್ಪ ಎಂಬವರನ್ನು ಕರ್ನಾಟಕ ನಗಾರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಂತೆ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರಿಗಳ ಅಪರ ಆಯುಕ್ತ ಆನಂದ ಪ್ರಕಾಶ್ ಮೀನ್ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: ರಾಯಚೂರು: ಶಾಲಾ ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ.. ಆಹಾರ ಸೇವಿಸಿದ 70 ಮಕ್ಕಳು ಅಸ್ವಸ್ಥ