ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಕಣೂರು ಗ್ರಾಮದ ಮನೆಯೊಂದರಲ್ಲಿ ಎರಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ.
ಚಿದಾನಂದ ಸಿಂಗ್ ಎನ್ನುವರ ಮನೆಯಲ್ಲಿ ಈ ಘಟನೆ ಜರುಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಡುಗೆ ಮನೆಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಕೂಡ ಸ್ಫೋಟಗೊಂಡಿವೆ.
ಈ ವೇಳೆ ಮನೆಯಲ್ಲಿದ್ದ ವೃದ್ಧೆಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಅಲ್ಲದೇ ಗ್ರಾಮಸ್ಥರು ಆತಂಕಗೊಂಡು ಹೊರಗಿನ ಹಳ್ಳದ ಕಡೆ ಓಡಿ ಹೋಗಿದ್ದಾರೆ. ಸ್ಫೋಟದಿಂದ ಬಾಂಬ್ ಬ್ಲಾಸ್ಟ್ ಆಗುವ ರೀತಿಯಲ್ಲಿ ಬಾರಿ ಶಬ್ದ ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತುರವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.