ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ರಾಮರಾವ್ ಕ್ಯಾಂಪ್ನಲ್ಲಿ ನಡೆದಿದೆ.
4ನೇ ತರಗತಿ ಓದುತ್ತಿದ್ದ ಚಿನ್ನಿ (10), 2ನೇ ತರಗತಿ ಓದುತ್ತಿದ್ದ ಪ್ರವೀಣ್ ಕುಮಾರ್ (8) ಮೃತ ಬಾಲಕರು. ಫೆ. 12ರಂದು ಶಾಲೆಗೆ ತೆರಳಿದ್ದ ಬಾಲಕರು, ಸಂಜೆಯಾದರೂ ಮನೆಗೆ ಬಂದಿರಲ್ಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು, ಇಡಪನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ವೇಳೆ ತುಂಗಭದ್ರಾ ಎಡದಂಡೆ ಕಾಲುವೆ ಕಡೆ ತೆರಳಿರಬಹುದೆಂದು ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಶೋಧ ನಡೆಸಿದಾಗ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಪ್ರವೀಣ್ ಮೃತದೇಹ ಹಾಗೂ ಗಾಣಧಾಳ ಗ್ರಾಮದ ಬಳಿಯಿರುವ ಕಾಲುವೆಯಲ್ಲಿ ಚಿನ್ನಿಯ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಇಡಪನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.