ರಾಯಚೂರು: ತುಂಗಭದ್ರಾ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಯದಿಂದ ನೀರು ಹರಿಯಬಿಡಲಾಗಿದೆ. ಇದರಿಂದಾಗಿ ಜಿಲ್ಲೆಯ ಎಡಭಾಗದಲ್ಲಿ ಬರುವ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕಿನ 30 ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ.
ಈ ಮೂವತ್ತು ಹಳ್ಳಿಗಳ ಪೈಕಿ 10 ಪ್ರವಾಹಕ್ಕೆ ಸಿಲುಕಿದ್ದು, ಉಳಿದ 20 ಗ್ರಾಮಗಳು 2009ರಲ್ಲಿ ಜಿಲ್ಲೆಗೆ ಅಪ್ಪಳಿಸಿದ ನೆರೆಹಾವಳಿಗೆ ಸ್ಥಳಾಂತರಗೊಂಡಿವೆ. ಆದ್ರೆ, ಕೆಲ ಗ್ರಾಮಗಳ ಜನರನ್ನು ಇನ್ನೂ ಶಿಫ್ಟ್ ಮಾಡಲಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಜನರಿಗೆ ಡಂಗುರ ಸಾರುವ ಮೂಲಕ ನದಿಗೆ ತೆರಳದಂತೆ ಎಚ್ಚರಿಕೆ ನೀಡಿದೆ.
ಜಿಲ್ಲೆಯ ಬಲ ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಿಂದ ದೇವದುರ್ಗ, ಲಿಂಗಸೂಗೂರು, ರಾಯಚೂರು ಪ್ರವಾಹ ಸಂಕಷ್ಟ ಎದುರಿಸುತ್ತಿವೆ.
ಇನ್ನು ಎಡಭಾಗದಲ್ಲಿ ತುಂಗಭದ್ರಾ ನದಿಯಿಂದಲೂ ಸಹ ಜಿಲ್ಲೆಗೆ ಪ್ರವಾಹ ಭೀತಿ ಶುರುವಾಗಿದ್ದು, 2009ರ ಜಲಪ್ರಳಯ ಮರುಕಳಿಸಬಹುದು ಎಂಬ ಆತಂಕ ಜನರಲ್ಲಿದೆ. ಮತ್ತೊಂದೆಡೆ ಇಷ್ಟು ದಿನಗಳ ಕಾಲ ಖಾಲಿ ಖಾಲಿಯಾಗಿದ್ದ ನದಿಯಲ್ಲಿ ನೀರು ಕಂಡ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.