ರಾಯಚೂರು: ಮಾರುಕಟ್ಟೆಯಲ್ಲಿ ಟೊಮೆಟೊಗೆ ವೈಜ್ಞಾನಿಕ ಬೆಲೆ ಸಿಗದೆ ರೋಸಿ ಹೋದ ರೈತರೊಬ್ಬರು ತಾವು ಬೆಳೆದ ಟೊಮೆಟೊವನ್ನು ರಸ್ತೆ ಬದಿ ಎಸೆದಿರುವ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಹತ್ತಿ ಮಾರುಕಟ್ಟೆ ಆವರಣದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ ರೈತರ ತರಕಾರಿ ವ್ಯಾಪಾರ ವಹಿವಾಟು ನಡೆಯುತ್ತದೆ. ಹೀಗಾಗಿ ರೈತ ತಾನು ಬೆಳೆದ ಟೊಮೆಟೊಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಂದಿದ್ದಾನೆ. ಆದರೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆಯಿಲ್ಲದ ಪರಿಣಾಮ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾನೆ.
ಕೆಜಿಗೆ 3 ರೂ. ಕೇಳಿದ್ದ:
ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ಸುಮಾರು 2 ರೂಪಾಯಿಯಂತೆ ವರ್ತಕರು ಬೆಲೆ ನಿಗದಿ ಮಾಡಿದ್ದಾರೆ. ಆದರೆ ರೈತ 3 ರೂಪಾಯಿ ನೀಡುವಂತೆ ಕೇಳಿಕೊಂಡಿದ್ದಾನೆ. ಆದರೆ ವರ್ತಕರು ಮಣೆ ಹಾಕದಿದ್ದಾಗ, ಆಕ್ರೋಶಗೊಂಡ ರೈತ ರಸ್ತೆ ಬದಿಗೆ ಎಸೆದು ಹೋಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮೊದಲಿಗೆ ಮಾರುಕಟ್ಟೆಯಲ್ಲಿ ಕೂಲಿಕಾರ್ಮಿಕರಿಗೆ, ಜನರಿಗೆ, ಹೋಟೆಲ್ ಮಾಲೀಕರಿಗೆ ಉಚಿತವಾಗಿ ವಿತರಣೆ ಮಾಡಿ, ಉಳಿದ ಎರಡ್ಮೂರು ಕ್ವಿಂಟಾಲ್ನಷ್ಟು ಟೊಮೆಟೊವನ್ನು ಮಾರುಕಟ್ಟೆ ಎದುರಿನ ರಸ್ತೆಗೆ ಚೆಲ್ಲಿ ಹೋಗಿದ್ದಾನೆ.
ರೈತರು ಟೊಮೆಟೊ ಬೆಳೆಗೆ ಸಾವಿರಾರು ರೂಪಾಯಿ ವ್ಯಯ ಮಾಡುತ್ತಾರೆ. ಆದ್ರೆ ಈಗಿರುವ ಮಾರುಕಟ್ಟೆಯಲ್ಲಿ ಕನಿಷ್ಠ ಮಾರಾಟ ಮಾಡಲು ತಂದಿರುವ ಆಟೋ ಬಾಡಿಗೆ, ಹೊಲದಲ್ಲಿ ಕೆಲಸ ಮಾಡುವ ಕೂಲಿಗಳಿಗೆ ಹಣ ಸಿಗುವುದಿಲ್ಲ. ಆದ್ರೆ ಖರೀದಿ ಮಾಡಿ ಮಾರಾಟ ಮಾಡುವನಿಗೆ ಲಾಭ ದೊರೆಯುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ರು.