ರಾಯಚೂರು: ಯಾರದೋ ಅಪ್ಪನ ಮಗ, ಅಥವಾ ಇನ್ಯಾರೋ ಅಣ್ಣನ ಮಗ ಎನ್ನುವ ಕಾರಣಕ್ಕೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರ್ಧಾರ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದವರಿಗೆ ಟಿಕೆಟ್ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ನಾಯಕರನ್ನು ತೀರ್ಮಾನ ಮಾಡುತ್ತಾರೆ. ಯಾರದೋ ಅಪ್ಪನ ಮಗ, ಯಾರದೋ ಅಣ್ಣನ ಮಗ ಎನ್ನುವ ಕಾರಣಕ್ಕೆ ವಿಧಾನಸಭಾ ಟಿಕೆಟ್‌ನ್ನು ಕೊಡುವುದಿಲ್ಲ ಎಂದರು.
ಅರ್ಹತೆಯ ಆಧಾರದ, ಮಾನದಂಡಗಳು ಇರುತ್ತವೆ. ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷದ ಕಾರ್ಯಕರ್ತರು ಒಪ್ಪುತ್ತಾರಾ, ಪಕ್ಷಕ್ಕೆ ಅನುಕೂಲವಾಗಲು ಮತ್ತು ಪಕ್ಷದ ಮಾನದಂಡದ ಮೇಲೆ ಟಿಕೆಟ್ ನೀಡುವ ಕುರಿತು ಕೇಂದ್ರ ಮತ್ತು ರಾಜ್ಯ ನಾಯಕರು, ಪಕ್ಷದ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಜಯೇಂದ್ರ ಅಚರು ಸ್ಪಷ್ಟಪಡಿಸಿದರು.
ಮಹಾನಾಯಕರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಬರಬಾರದಿತ್ತು. ಪಕ್ಷ ಅಧಿಕಾರಕ್ಕೆ ಬರುತ್ತೆ, ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಂಡ ಮಹಾನಾಯಕರಿಗೆ ಇಂತಹ ಪರಿಸ್ಥಿತಿ ಬಂದಿರುವುದು ನಿಜವಾಗಿಯೂ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ. ಪಕ್ಷದ ಕಾರ್ಯಕರ್ತರ ಮೇರೆಗೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಹೀಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿಂದ ಸ್ಪರ್ಧೆ ಮಾಡುವುದರ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತಾದೆ ಎಂದು ಹೇಳಿದರು.
ಇದನ್ನೂ ಓದಿ : ಕೃಷ್ಣನಾಗಿ ಜಾವಿದ್ ಪಾಷಾ, ಧರ್ಮರಾಯ ರಜಾಕ್ ಸಾಬ್..: ಮುಸ್ಲಿಂ ಪಾತ್ರಧಾರಿಗಳಿಂದ 'ಕುರುಕ್ಷೇತ್ರ' ನಾಟಕ
ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನರು ಸಂತೃಪ್ತರಾಗಿದ್ದಾರೆ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಮಾಡುತ್ತಿದ್ದೇವೆ. ನಿರೀಕ್ಷೆಗೂ ಮೀರಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನರು ಸಂತೃಪ್ತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಇಂದು ಬೆಳಗಾವಿಗೆ: ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿ
ಯುವ ಸಮಾವೇಶ: ಇದಕ್ಕೂ ಮುನ್ನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಶಾಸಕ ಡಾ. ಶಿವರಾಜ್ ಪಾಟೀಲ್ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮುಷ್ಕರ : ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು ಪೊಲೀಸ್ ವಶಕ್ಕೆ