ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಕಾಟೆಬೇಸ್ ಬಡಾವಣೆಯ ಸರ್ವೆ ನಂ.768/1 ರಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕು ಪತ್ರ ನೀಡಬೇಕೆಂದು ಕಳೆದ 54 ದಿನಗಳಿಂದ ಸಿಂಧನೂರಿನಲ್ಲಿ ಧರಣಿ ನಡೆಸುತಿದ್ದರೂ ತಹಶೀಲ್ದಾರಾಗಲಿ, ಸಹಾಯಕ ಆಯುಕ್ತರಾಗಲಿ ಸ್ಪಂದಿಸುತ್ತಿಲ್ಲ ಎಂದು ಸಿಪಿಐ ಎಮ್.ಎಲ್( ರೆಡ್ ಸ್ಟಾರ್), ಜಿಲ್ಲಾ ಸಮಿತಿಯ ಕಾರ್ಯದರ್ಶಿ ನಾಗಲಿಂಗಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಂಧನೂರು ನಗರದ ವಾರ್ಡ್ ನಂ. 6 ರ ಕಾಟೆಬೇಸ್ ನ ಸರ್ವೆ ನಂ. 768/ 1 ರಲ್ಲಿ 4.39 ಎಕರೆ ಕಂದಾಯ ಇಲಾಖೆಯ ಭೂಮಿಯನ್ನು ಕೆಲ ಭೂಗಳ್ಳರು ಒತ್ತುವರಿ ಮಾಡುತಿದ್ದು ತಾಲೂಕು ಆಡಳಿತ ಸುಮ್ಮನಾಗಿದೆ. ಅಲ್ಲದೆ ಮತ್ತೊಂದು ಕಡೆ ಸುಮಾರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿರುವ ಬಡವರಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂದು ದೂರಿದರು.
ಅಲ್ಲದೇ ಸದರಿ ಬಡಾವಣೆಯಲ್ಲಿ ಕಳೆದ 40 ವರ್ಷಗಳಿಂದ 60 ಬಡ ಕುಟುಂಬಗಳು ಜೋಪಡಿ ಹಾಕಿಕೊಂಡು ವಾಸವಾಗಿದ್ದು, ಅವರಿಗೆ ಹಕ್ಕು ಪತ್ರ ನೀಡಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ 54 ದಿನಗಳಿಂದ ಹೋರಾಟ ಮಾಡುತಿದ್ದರೂ ತಹಶೀಲ್ದಾರರು ಸ್ಪಂದಿಸುತ್ತಿಲ್ಲ ಎಂದರು. ಇತ್ತೀಚೆಗೆ ಸಿಂಧನೂರುನಲ್ಲಿ ರಸ್ತೆ ತಡೆ ನಡೆಸಿ ಒತ್ತಾಯಿಸಿದಾಗ ಎರಡ್ಮೂರು ದಿನಗಳಲ್ಲಿ ಹಕ್ಕುಪತ್ರ ನೀಡುತ್ತೆವೆಂದು ಭರವಸೆ ನೀಡಿ ಮಾತು ತಪ್ಪಿದ್ದಾರೆ ಎಂದು ದೂರಿದರು. ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದಲ್ಲದೇ ಬಡವರನ್ನು ಒಕ್ಕೆಲೆಬ್ಬಿಸುವ ಹುನ್ನಾರ ನಡೆಸಿದ್ದು ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.