ಲಿಂಗಸುಗೂರು (ರಾಯಚೂರು): ಉದ್ಯೋಗ ಖಾತ್ರಿ ಕೆಲಸ ಮುಗಿಸಿಕೊಂಡು ಮರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದ 20 ಮಂದಿ ಗಾಯಗೊಂಡಿದ್ದಾರೆ.
ರಾಯಚೂರಿನ ಮಸ್ಕಿ ತಾಲೂಕಿನ ಸಂತೆ ಕೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರಲದಿನ್ನಿ ಅಣೆಕಟ್ಟೆ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಕೆಲಸ ಮುಗಿಸಿಕೊಂಡು ಕಾರ್ಮಿಕರು ಟ್ರ್ಯಾಕ್ಟರ್ನಲ್ಲಿ ವಾಪಾಸ್ ಬರುತ್ತಿದ್ದರು. ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಟ್ರ್ಯಾಕ್ಟರ್ನಲ್ಲಿ 35 ಕೂಲಿ ಕಾರ್ಮಿಕರಿದ್ದರು. ಈ ಪೈಕಿ 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಲಕ್ಷ್ಮಪ್ಪ ತಿಳಿಸಿದರು. ತೀವ್ರ ಗಾಯಗೊಂಡವರನ್ನು ದುರುಗಮ್ಮ, ದೇವಮ್ಮ, ಶಿವಪ್ಪಮತ್ತು ಗುಂಡಮ್ಮ ಎಂದು ಗುರುತಿಸಲಾಗಿದೆ.