ರಾಯಚೂರು : ಲಾಕ್‌ಡೌನ್ ವಿಸ್ತರಣೆ ಕುರಿತಂತೆ ಇಂದು ಅಥವಾ ನಾಳೆ ಪ್ರಧಾನಮಂತ್ರಿಗಳು ತೀರ್ಮಾನಿಸುತ್ತಾರೆ. ಈ ತೀರ್ಮಾನಕ್ಕೆ ರಾಜ್ಯ ಸರ್ಕಾರವೂ ಬದ್ಧವಾಗಿರುತ್ತದೆ. ರಾಯಚೂರು ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಕೇಸ್ ಇಲ್ಲದೇ ಇರುವುದು ಸಂತೋಷ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ರಾಯಚೂರಿನಲ್ಲಿ ಪಾಸಿಟಿವ್ ಕೇಸ್ ಇಲ್ಲದಿದ್ದರೂ ಪಕ್ಕದ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಇರುವ ಹಿನ್ನೆಲೆ ಈಗಾಗಲೇ ಜಿಲ್ಲೆಯ ರಸ್ತೆ ಬಂದ್ ಮಾಡಲಾಗಿದೆ ಎಂದರು. ಸಾರಿಗೆ ಇಲಾಖೆಯಿಂದ ಕಂಟ್ರೋಲ್ ರೂಂ ಆರಂಭವಾಗಿದೆ. ತೊಂದರೆಯಲ್ಲಿರುವ ರೈತ ಹಾಗೂ ವೈದ್ಯಕೀಯ ಸೇವೆಯ ಅನುಕೂಲಕ್ಕಾಗಿ ನಿರಂತರ ಕರೆ ಮಾಡುವ ಸೌಲಭ್ಯ ನೀಡಲಾಗಿದೆ. ಹೆಲ್ಪ್‌ಲೈನ್ ನಂಬರ್-08022326698, ಮೊಬೈಲ್-9449863214 ಈ ನಂಬರ್ಗಳಿಗೆ ಕರೆ ಮಾಡಿ ಸೌಲಭ್ಯವನ್ನ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯ ದೇವರಭೂಪುರ ಗ್ರಾಮದಲ್ಲಿ ವಾಂತಿ, ಬೇಧಿ ಪ್ರಕರಣದ ಕುರಿತು ಈಗ ಮಾಹಿತಿ ಇಲ್ಲ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು. ಕುಡಿಯುವ ನೀರು, ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುತ್ತೆ. ಹಾಟ್‌ಸ್ಪಾಟ್ ಬಿಟ್ಟು ಗ್ರೀನ್ ಪ್ರದೇಶದಲ್ಲಿ ಸಡಿಲಗೊಳಿಸುವ ಚಿಂತನೆ ಇದೆ. ಈ ಕುರಿತು ಕೇಂದ್ರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.