ರಾಯಚೂರು : ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕಾಟೆ ದರ್ವಾಜ್ ಸುತ್ತಮುತ್ತ ಹಲವಾರು ವ್ಯಾಪಾರ ಮಳಿಗೆ ಹಾಗೂ ಬಹುಮಹಡಿ ಕಟ್ಟಡ ತಲೆ ಎತ್ತಿದ್ದು, ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಜಾಣ ಕುರುಡುತಣದಂತೆ ವರ್ತಿಸುತ್ತಿದ್ದಾರೆ.
ಐತಿಹಾಸಿಕ ಸ್ಥಳಗಳ ಸುತ್ತಲೂ ಖಾಸಗಿ ಅಪಾರ್ಟ್ಮೆಂಟ್ ಹಾಗೂ ವ್ಯಾಪಾರ ಮಳಿಗೆ ಇರಕೂಡದೆಂಬ ಕಾನೂನು ಇದೆ. ಆದರೆ ಇಲ್ಲಿ ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಹಾಗೂ ನಗರಸಭೆ ಕಡಿವಾಣ ಹಾಕಬೇಕಿದ್ದರೂ ಜಾಣ ಕುರುಡು ನೀತಿ ಅನಿಸರಿಸುತ್ತಿದೆ.
ನಗರದ ಒಳ ಭಾಗದಲ್ಲಿರುವ ಈ ಐತಿಹಾಸಿಕ ಕಾಟೆಯ ಪಕ್ಕದಲ್ಲಿಯೇ ಬೀಫ್, ಬಿರ್ಯಾನಿ ಹೋಟೆಲ್, ಮುಂಭಾಗದಲ್ಲಿ ವೈನ್ ಶಾಪ್ ಸೇರಿದಂತೆ ಅನೇಕ ವ್ಯಾಪಾರಿ ಮಳಿಗೆಗಳಿದ್ದು, ಇನ್ನೂ ಅನೇಕ ವ್ಯಾಪಾರ ಮಳಿಗೆ ಹಾಗೂ ಬಹು ಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಾ ಬಂದಿದೆ ಇಲ್ಲಿನ ನಗರಸಭೆ.
ಇನ್ನೂ ಈ ಕಾಟೆ ದರ್ವಾಜ್ ಸುತ್ತಮುತ್ತಲಿನ ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಮೆಲ್ವಿಚಾರಕ ಶಿವಪ್ರಕಾಶ್ರನ್ನ ಕೇಳಿದರೆ, ಕಾಟೆ ದರ್ವಾಜ್ದ ಸುತ್ತಮುತ್ತಲಿನ ಕಟ್ಟಡ ನಿರ್ಮಾಣದ ಕುರಿತು ಖಾಸಗಿ ವ್ಯಕ್ತಿ ಹಾಗೂ ಇಲಾಖೆಯಿಂದ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯಲ್ಲಿ ಕೇಸ್ ನಡೆಯುತ್ತಿದ್ದು ತಪ್ಪಿತಸ್ಥರ ಮೇಲೆ ಕ್ರಮ ಜರುಗಲಿದೆ ಎಂದು ಹೇಳಿದ್ದಾರೆ.
ಐತಿಹಾಸಿಕ ಕಾಟೆ ದರ್ವಾಜ್ದ ರಕ್ಷಣೆಗೆ ಇಲಾಖೆ ಬದ್ಧವಾಗಿದೆ ನಾನು ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ನೀಡಲಾರೆ ಎಂದು ಉತ್ತರ ನೀಡುತ್ತಾರೆ. ವಿಪರ್ಯಾಸ ವೆಂದರೆ ಇತಿಹಾಸ ಸಾರುವ ಐತಿಹಾಸಿಕ ಕೋಟೆ ಉಳಿಸಿ ಬೆಳೆಸಬೇಕಾದ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳೇ ಈ ರೀತಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ.