ಶಿವಮೊಗ್ಗ : ಇಂದಿನಿಂದ 6, 7 ಹಾಗೂ 8ನೇ ತರಗತಿಗಳು ಪ್ರಾರಂಭವಾಗಿವೆ. ಕೊರೊನಾ ಎಸ್ಒಪಿ ಪ್ರಕಾರವೇ ತರಗತಿ ನಡೆಯುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಶಾಲೆಗಳಿಗೆ ಭೇಟಿ ನೀಡಿ ಶಾಲಾ ತಾಂತ್ರಿಕ ಸಮಿತಿಯ ನಿಯಮ ಪಾಲನೆ ಕುರಿತು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಇಂದಿನಿಂದ 8 ಗಂಟೆಗಳ ಕಾಲ ಶಾಲೆ ನಡೆಯಲಿದೆ. ಇಂದು ಜಿಲ್ಲಾದ್ಯಾಂತ ಶೇ.82ರಷ್ಟು ಮಕ್ಕಳ ಹಾಜರಾತಿ ಇದೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಹಾಜರಾತಿ ಚೆನ್ನಾಗಿದೆ ಎಂದರು.
ಮಕ್ಕಳು ಖುಷಿಯಿಂದಲೇ ಶಾಲೆಗೆ ಬಂದು ಕಲಿಯುತ್ತಿದ್ದಾರೆ. ಈವರೆಗೆ ಮಧ್ಯಾಹ್ನದ ಊಟ ಪ್ರಾರಂಭವಾಗಿಲ್ಲ. ಸರ್ಕಾರ ನಿರ್ದೇಶನ ನೀಡಿದ ತಕ್ಷಣ ಊಟ ಪ್ರಾರಂಭಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ 2.278 ಪ್ರಾಥಮಿಕ ಶಾಲೆಗಳು, 460 ಹೈಸ್ಕೂಲ್‌ಗಳಿವೆ. ಕಳೆದ ವರ್ಷ 2.62 ಲಕ್ಷ, ಈ ವರ್ಷ 2.59 ಲಕ್ಷ ಮಕ್ಕಳು ಹಾಜರಾಗಿದ್ದಾರೆ. ಈಗಲೂ ದಾಖಲಾತಿ ನಡೆಯುತ್ತಿರುವುದರಿಂದ ಮಕ್ಕಳು ಬರುವ ನಿರೀಕ್ಷೆ ಇದೆ ಎಂದರು.
ರಾಯಚೂರಿನಲ್ಲಿ 6ರಿಂದ 8ನೇ ತರಗತಿ ಆರಂಭ : ಜಿಲ್ಲೆಯ ಒಟ್ಟು 1453 ಉನ್ನತೀಕರಿಸಿದ ಶಾಲೆಗಳಲ್ಲಿ 152340 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಬೆಳಗ್ಗೆ ಶಾಲಾ ಸಮಯಕ್ಕೆ ಶಿಕ್ಷಕರು ಆಗಮಿಸಿ, ಶಾಲೆಗೆ ಬರುವಂತಹ ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ಧರಿಸುವುದು ಹಾಗೂ ಥರ್ಮಲ್ ಸ್ಕ್ಯಾನ್ ಮಾಡಿ ನಂತರ ತರಗತಿಗೆ ಕಳುಹಿಸಲಾಗುತ್ತಿದೆ.
ಓದಿ: ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯದಿದ್ದರೆ ಬಿಸಿ ಮುಟ್ಟಿಸಬೇಕಾಗುತ್ತದೆ: ಹೆಚ್ಡಿಕೆ ಎಚ್ಚರಿಕೆ
ಶಾಲೆಗೆ ಬರುವಂತಹ ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ತಿಳಿಸಲಾಗಿದೆ. ಜತೆಗೆ ಮಕ್ಕಳು ಮನೆಯಿಂದಲೇ ನೀರು, ಊಟ ತರುವಂತೆ ಸೂಚಿಲಾಗಿದೆ. ಈ ನಿಟ್ಟಿನಲ್ಲಿ ಮಕ್ಕಳೇ ನೀರು, ಊಟ ತೆಗೆದುಕೊಂಡು ಶಾಲೆಗಳಿಗೆ ತೆರಳಿದ್ದಾರೆ. ಕೊರೊನಾ ಎಫೆಕ್ಟ್‌ನಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವುದಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.