ರಾಯಚೂರು : ರಾಜ್ಯದ ಎರಡು ವಿಧಾನಸಭಾ ಕ್ರೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಕೂಡಿದೆ. ಆದರೆ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗದಿದ್ದರೂ ಈಗಗಲೇ ಕೆಲ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮಸ್ಕಿಯ ಮುಂಬರುವ ಚುನಾವಣೆಗಾಗಿ ಜಾರಕಿಹೊಳಿ ಬ್ರದರ್ಸ್ ಈಗಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಪರ ಪ್ರಚಾರ ಶುರು ಮಾಡಿದ್ದು, ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವ ಪ್ರತಾಪಗೌಡ ಪಾಟೀಲ್ರು ಚುನಾವಣೆ ಘೋಷಣೆಯಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಇವರಿಗೆ ಸಾಥ್ ನೀಡಲು ಬೆಳಗಾವಿ ಸಾಹುಕಾರ ಸಚಿವ ರಮೇಶ ಜಾರಕಿಹೊಳಿ ನಿಂತಿದ್ದಾರೆ.
ಇತ್ತೀಚೆಗೆ ನಡೆದಂತಹ ಏತನೀರಾವರಿ ಯೋಜನೆ ಕಾಮಗಾರಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ, ಬರುವ ಉಪಚುನಾವಣೆಯಲ್ಲಿ ಪ್ರತಾಪಗೌಡರನ್ನು ಗೆಲ್ಲಿಸಿ, ಅವರು ಸಚಿವರು ಆಗುತ್ತಾರೆ. ನಾನು ಸಹ ಜಿಲ್ಲೆಯ ಎಲ್ಲಾ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ನಿಂದ ಗೆಲುವು ಸಾಧಿಸಿ, ಪಕ್ಷಕ್ಕೆ ಗುಡ್ ಬೈ ಹೇಳಿರುವ ಪ್ರತಾಪಗೌಡ ಪಾಟೀಲ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಕೈ ಪಕ್ಷದ ನಾಯಕರು ಈಗಾಗಲೇ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪ್ರತಾಪಗೌಡರಿಗೆ ತಕ್ಕ ಪಾಠಕಲಿಸಬೇಕೆಂದು ಪ್ರಚಾರ ನಡೆಸುತ್ತಿದ್ದಾರೆ.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹ ನಿನ್ನೆ ಸಂಜೆ ಮಸ್ಕಿ ಕ್ಷೇತ್ರಕ್ಕೆ ಬಂದು ಪಕ್ಷದ ಕಾರ್ಯಕ್ರಮದಲ್ಲಿ ಪ್ರತಾಪಗೌಡರನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಮೂಲಕ ಬರುವ ಉಪ ಚುನಾವಣೆಯಲ್ಲಿ ಬೆಳಗಾವಿ ಸಾಹುಕಾರ ಸತೀಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ.
ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾರೆಂದು ಆಯ್ಕೆಯಾಗಿಲ್ಲ. ಕೆಲವರು ಸ್ಪರ್ಧಿಸಲು ಇಚ್ಚಿಸಿದ್ರೆ, ಪ್ರತಾಪಗೌಡರ ಸೋಲಿಸಲು ಸೂಕ್ತ ಅಭ್ಯರ್ಥಿಯನ್ನ ಸಹ ಹುಡಕಾಟ ನಡೆದಿದೆ. ಏತನ್ಮಧ್ಯೆ ಬಿಜೆಪಿ ಬಸವನಗೌಡ ತುರುವಿಹಾಳ ಸಹ ಪಕ್ಷಕ್ಕೆ ಕರೆತಂದು ಚುನಾವಣೆ ನಿಲ್ಲಿಸಬೇಕು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಆದ್ರೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆ ಮುನ್ನವೇ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರಿದ್ದು, ಬೆಳಗಾವಿ ಸಹೋದರಿಬ್ಬರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ.