ರಾಯಚೂರು: ಮನೆಯ ಮುಂದೆ ಆಟವಾಡುತ್ತಿದ್ದ ಮಾಜಿ ಶಾಸಕ ಜಿ. ಹಂಪಯ್ಯ ನಾಯಕ ಮೊಮ್ಮಕ್ಕಳಿಬ್ಬರು ಶವವಾಗಿ ಪತ್ತೆಯಾಗಿದ್ದು, ಕೊಲೆಯಾಗಿರುವ ಸಂಶಯ ವ್ಯಕ್ತವಾಗಿದೆ.
ವರುಣ (9), ಸಣ್ಣಯ್ಯ (5) ಮೃತ ಬಾಲಕರು. ಇವರು ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಮಾಜಿ ಶಾಸಕ ಜಿ. ಹಂಪಯ್ಯ ನಾಯಕ ಅವರ ಕಿರಿಯ ಮಗ ಶಿವಾನಂದರ ಪುತ್ರರು. ಇಂದು ಬೆಳಗ್ಗೆ ಗ್ರಾಮದಲ್ಲಿನ ಹಳ್ಳದಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಕಳೆದ ಭಾನುವಾರ ಮಧ್ಯಾಹ್ನ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಕಾಣೆಯಾಗಿದ್ದರು. ವಿಷಯ ತಿಳಿದು ಕುಟುಂಬಸ್ಥರು ಗ್ರಾಮವೆಲ್ಲಾ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಈ ಹಿಂದೆ ಇಂತಹದೇ ನಾಲ್ಕು ಪ್ರಕರಣಗಳು ನಡೆದಿದ್ದು, ಇದು ಐದನೇ ಪ್ರಕರಣ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಮಕ್ಕಳು ಶವವಾಗಿ ಪತ್ತೆಯಾಗುತ್ತಿದ್ದಾರೆ ಎನ್ನುವ ಸತ್ಯ ನಿಗೂಢವಾಗಿದ್ದು, ಮಾಟ, ಮಂತ್ರಕ್ಕಾಗಿ ಬಲಿಕೊಟ್ಟಿದ್ದಾರೆಯೇ ಎನ್ನುವ ಗುಮಾನಿ ಗ್ರಾಮವೆಲ್ಲಾ ಹಬ್ಬಿದೆ.
ಜಿ. ಹಂಪಯ್ಯ ನಾಯಕ ಎರಡು ಬಾರಿ ಮಾನವಿ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. ಇಂತಹ ಪ್ರಭಾವಿ ಮುಖಂಡರ ಮೊಮ್ಮಕ್ಕಳಿಗೆ ರಕ್ಷಣೆಯಿಲ್ಲದಿದ್ದರೆ, ಸಾಮಾನ್ಯ ಜನತೆಯ ಪಾಡೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಘಟನೆ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸಾವಿನ ನಿಜಾಂಶ ಬಯಲಿಗೆ ಬರಲಿದೆ.
ಇದನ್ನೂ ಓದಿ.. ಮನೆ ಮುಂದೆ ಆಟವಾಡುತ್ತಿದ್ದ ಮಾಜಿ ಶಾಸಕನ ಮೊಮ್ಮಕ್ಕಳಿಬ್ಬರು ನಾಪತ್ತೆ.. ಆತಂಕದಲ್ಲಿ ಕುಟುಂಬ!