ಲಿಂಗಸುಗೂರು : ತಾಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು ಶಂಕಿತ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಶನಿವಾರ ರಾತ್ರಿ ಲಿಂಗಸುಗೂರು ಪಟ್ಟಣದ ವ್ಯಾಪಾರಿ ಮತ್ತು ಸರ್ಜಾಪುರ ಗ್ರಾಮದ ಯುವಕನನ್ನು ಹಾಗೂ ಮಸ್ಕಿ ಪಟ್ಟಣದ ಯುವಕನನ್ನು ಕೋವಿಡ್ -19 ಶಂಕೆ ಮೇಲೆ ರಾಯಚೂರು ಆಸ್ಪತ್ರೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾತ್ರೋರಾತ್ರಿ ತಾಲೂಕಿನ ಇಬ್ಬರು ಹಾಗೂ ಮಸ್ಕಿ ತಾಲೂಕಿನ ಒಬ್ಬರನ್ನು ಲಿಂಗಸುಗೂರು ಆಸ್ಪತ್ರೆಗೆ ಐಸೊಲೇಷನ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಇದರಿಂದಾಗಿ ಹೊರ ಹಾಗೂ ಒಳ ರೋಗಿಗಳ ಜತೆಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ರಾಯಚೂರಿಗೆ ತೆರಳುವ ಮಧ್ಯ ಮಾರ್ಗದಿಂದ ಈ ರೋಗಿಗಳನ್ನು ಮರಳಿ ಕರೆತಂದಿರುವ ಬಗ್ಗೆ ಭಾರಿ ಕುತೂಹಲದ ಸಂಗತಿ ಕೇಳಿ ಬಂದಿವೆ.
ಕ್ವಾರಂಟೈನ್ಗೆ ಊರ ಹೊರಗಡೆ ಕರೆದೊಯ್ದರೆ, ಕೋವಿಡ್-19 ರೋಗಿಗಳನ್ನು ನಗರದ ಹೃದಯಭಾಗದಲ್ಲಿ ತಂದಿಟ್ಟ ತಾಲೂಕು ಆಡಳಿತದ ಕಾರ್ಯವೈಖರಿ ಬಗ್ಗೆ ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಅಧ್ಯಕ್ಷ ಜಾಫರ್ಹುಸೇನ ಫೂಲವಾಲೆ ಆಕ್ಷೇಪಿಸಿದ್ದಾರೆ.