ರಾಯಚೂರು: ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿ ಪರಿಣಾಮ ಕರಕಲಗಡ್ಡಿ ನಡುಗಡ್ಡೆಯಲ್ಲಿನ ಜನರು ಸಿಲುಕಿಕೊಂಡಿದ್ದು, ಪಾರ್ಶ್ವವಾಯು ಪೀಡಿತನಿಗೆ ಔಷಧ ಸೇರಿದಂತೆ ಉಳಿದ ಜನರಿಗೆ ಅಗತ್ಯ ವಸ್ತುಗಳನ್ನು ಡ್ರೋನ್ ಕ್ಯಾಮೆರಾದ ಸಹಾಯದಿಂದ ಪೂರೈಕೆ ಮಾಡಲಾಯಿತು.
ತಾಲೂಕು ಸಹಾಯಕ ಆಯುಕ್ತ ರಾಜಶೇಖರ ಡಂಬಳ ನೇತೃತ್ವದಲ್ಲಿ ಕರಕಲಗಡ್ಡಿಯಲ್ಲಿ ವಾಸವಿರುವ ಕುಟುಂಬಸ್ಥರ ಮನವಿ ಮೇರೆಗೆ ಈ ಕಾರ್ಯ ನಡೆದಿದ್ದು, ಕೃಷಿ ವಿಶ್ವವಿದ್ಯಾಲಯದ ಡ್ರೋನ್ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಯಶಸ್ವಿ ಕಾರ್ಯಾಚರಣೆ ನಡೆಯಿತು. ನಾರಾಯಣಪುರ ಅಣೆಕಟ್ಟೆಯಿಂದ ತೀವ್ರ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಕರಕಲಗಡ್ಡಿ ಜನರ ಸ್ಥಳಾಂತರ ಸಾಧ್ಯವಾಗಿರಲಿಲ್ಲ. ನಡುಗಡ್ಡೆಯಲ್ಲಿ ಸಿಲುಕಿರುವ ಅನಾರೋಗ್ಯ ಪೀಡಿತ ವ್ಯಕ್ತಿಗೆ ಮಾತ್ರೆ ನೀಡುವುದು ಮತ್ತು ಅಗತ್ಯ ಪಡಿತರ ನೀಡಲು ಈ ಮಾರ್ಗ ಅನಿವಾರ್ಯ ಎಂದು ತಿಳಿದ ತಾಲೂಕು ಆಡಳಿತ ಡ್ರೋನ್ ಮೂಲಕ ವಸ್ತುಗಳನ್ನು ಪೂರೈಸಿ ಜನರ ಕಷ್ಟಕ್ಕೆ ಸ್ಪಂದಿಸಿದೆ.
ಈ ವೇಳೆ, ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ನಡುಗಡ್ಡೆ ಪ್ರದೇಶಗಳ ಜನತೆ ರಕ್ಷಣೆಗೆ ನಮ್ಮ ಆಡಳಿತ ಬದ್ಧವಾಗಿದೆ. ಅಲ್ಲಿನ ಜನರ ಪರಿಸ್ಥಿತಿ ಅರಿತ ನಾವು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಅಲ್ಲಿನ ಜನರ ಸಹಕಾರ ತಮಗೆ ಅತ್ಯಗತ್ಯ ಎಂದರು.