ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ನಿಲೋಗಲ್ ಕ್ರಾಸ್ ಬಳಿ ಬಸವನಗೌಡ ಎನ್ನುವ ರೈತ ಅರ್ಧ ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದು, ಉತ್ತಮ ಲಾಭ ಪಡೆಯುತ್ತಿದ್ದಾರೆ.
ಆರೆಂಜ್ ಕಲರ್, ಹಳದಿ ಬಣ್ಣದ ಚೆಂಡು ಹೂವು ಬೆಳೆದಿದ್ದು, ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಗೆ ತೆಗೆದುಕೊಂಡು ಮಾರಾಟ ಮಾಡುವ ಬದಲಿಗೆ, ಸುತ್ತಮುತ್ತಲಿನ ಹೂವಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವ್ಯಾಪಾರಿಗಳು ನೇರ ರೈತನ ಹೊಲಕ್ಕೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಸಾವಿರಾರು ಸಸಿಗಳು ನೀರು ಪಾಲಾಗಿವೆ. ಆದರೂ ಬದುಕುಳಿದ ಕೆಲವು ಸಸಿಗಳು ರೈತನ ಕೈ ಹಿಡಿದಿವೆ. ಚೆಂಡು ಹೂವಿನ ಬೆಳೆ ಉತ್ತಮ ಆದಾಯ ನೀಡಿದೆ ಅಂತಾರೆ ಹೂವು ಬೆಳೆಗಾರ.
ಬಸವನಗೌಡ ಗ್ರಾಮೀಣ ಜನರಿಗೆ ಆದ್ಯತೆ ನೀಡುವ ಉದ್ದೇಶದಿಂದ ಗ್ರಾಮಗಳಲ್ಲಿ ವ್ಯಾಪಾರ ಮಾಡುವವರಿಗೆ ಪ್ರತಿ ಕೆಜಿ ಚೆಂಡು ಹೂವಿಗೆ 80 ರೂಪಾಯಿವರೆಗೆ ಮಾರಾಟ ಮಾಡಿದ್ದಾರೆ. ನಗರ ಪ್ರದೇಶದ ವ್ಯಾಪಾರಿಗಳಿಗೆ 120 ಕೆಜಿ ವರೆಗೆ ಮಾರಾಟ ಮಾಡುತ್ತಿದ್ದಾರೆ. ನೇರವಾಗಿ ಗ್ರಾಹಕರು ಬಂದರೆ ಹೋಲ್ ಸೇಲ್ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಅಕಾಲಿಕ ಮಳೆ, ಕೊರೊನಾ ಸೋಂಕಿನ ಸಂಕಷ್ಟದ ನಡುವೆ ಹೂವಿನ ಬೆಳೆ ರೈತನಿಗೆ ತುಸು ನೆಮ್ಮದಿ ತರಿಸಿದ್ದು,ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಿದೆ.