ರಾಯಚೂರು: "ಜೆಡಿಎಸ್ ಪಂಚರತ್ನ ಯಾತ್ರೆ ಪ್ರಚಾರದ ವೇಳೆ ಕಲ್ಲು ತೂರಾಟ ನಡೆಸಿ ವಾಹನ ಚಾಲಕನ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ" ಎಂದು ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಆರೋಪಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ನ ಮಹಿಳಾ ಅಭ್ಯರ್ಥಿ ಕರಿಯಮ್ಮ ಪರವಾಗಿ ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾನುವಾರ ಪಂಚರತ್ನ ಯೋಜನೆ ಪ್ರಚಾರ ವಾಹನ ದೇವತಗಲ್ ಗ್ರಾಮಕ್ಕೆ ತೆರಳಿದ್ದಾಗ ಆ ಗ್ರಾಮದ ಬಿಜೆಪಿ ಮುಖಂಡರು ಪ್ರಚಾರಕ್ಕೆ ಅಡ್ಡಿಪಡಿಸಿದ್ದಲ್ಲದೇ, ಅದೇ ಗ್ರಾಮದ ವಾಹನ ಚಾಲಕನ ಮೇಲೆ ಹಾಗೂ ಗ್ರಾಮದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತ ಶ್ರೀನಿವಾಸ ಎಂಬುವರ ತಲೆಗೆ ಪೆಟ್ಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ಕೇಸ್ ತೆಗೆದುಕೊಂಡು ಹೋಗೋದಕ್ಕಾ?: ಹೆಚ್ಡಿಕೆ ಪ್ರಶ್ನೆ
ಘಟನೆ ಕುರಿತು ಜೆಡಿಎಸ್ ಮುಖಂಡರು ಹಾಗೂ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ, ದೇವದುರ್ಗದ ಹಾಲಿ ಶಾಸಕ ಕೆ.ಶಿವನಗೌಡ ಅವರ ಕುಮ್ಮಕ್ಕಿನಿಂದಲೇ ಹಲ್ಲೆ ನಡೆದಿದೆ. ಹೀಗಾಗಿ, ಅವರ ಮೇಲೂ ದೂರು ದಾಖಲಿಸಿಕೊಳ್ಳುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೆಲ ಹಳ್ಳಿಗಳಲ್ಲಿ ಜನರ ಬದುಕು ನೋಡಿ ಭಾರಿ ಬೇಸರವಾಯಿತು: ಹೆಚ್ ಡಿ ಕುಮಾರಸ್ವಾಮಿ
ದೇವದುರ್ಗ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ. ಜೆಡಿಎಸ್ನಿಂದ ಕರಿಯಮ್ಮ ಅಭ್ಯರ್ಥಿಯೆಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಚುನಾವಣೆ ಘೋಷಣೆಗೂ ಮುನ್ನ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ. ಮೊದಲ ಹಂತವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ನಡೆಸಿದ್ದರು. ಇದಾದ ನಂತರ ಅಭ್ಯರ್ಥಿಯಾಗಿರುವ ಕರಿಯಮ್ಮ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರತಿನಿತ್ಯ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಜೆಡಿಎಸ್ನ ಪಂಚರತ್ನ ಯೋಜನೆಯ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಹೆಚ್ಡಿಕೆ ತೋಟದ ಮನೆಯಲ್ಲಿ ಚಂಡಿಕಾ ಯಾಗ:300ಕ್ಕೂ ಹೆಚ್ಚು ಪುರೋಹಿತರು ಭಾಗಿ
ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ನಡುವೆ ತೀವ್ರ ಪೈಪೋಟಿ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಲೆಕ್ಷನ್ಗೂ ಮುನ್ನವೇ ಭಾರಿ ಹಣಾಹಣಿ ನಡೆಯುತ್ತಿದ್ದು, ಚುನಾವಣಾ ದಿನಾಂಕ ಘೋಷಣೆ ಬಳಿಕ ಮತ್ತಷ್ಟು ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಡವರ ಸಂಕಷ್ಟ ನಿವಾರಣೆಗೆ ಪಂಚ ಯೋಜನೆ ಜಾರಿ : ಕುಮಾರಸ್ವಾಮಿ
ಆರೋಪದ ಕುರಿತು ದೇವದುರ್ಗ ಬಿಜೆಪಿ ತಾಲೂಕು ಅಧ್ಯಕ್ಷ ಜಂಬನಗೌಡ ಅವರು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ''ಈಗ ಚುನಾವಣೆ ಸಮಯವಾಗಿದೆ. ಆದರೆ, ಜೆಡಿಎಸ್ನವರು ತಮ್ಮಿಂದ ಚುನಾವಣೆ ಎದುರಿಸಲು ಆಗದೇ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಇಂತಹ ಕೆಲಸ ಮಾಡಿಲ್ಲ'' ಎಂದು ಹೇಳಿದ್ದಾರೆ.