ರಾಯಚೂರು: ಯರಗೇರಾ ಸ್ನಾತಕೋತ್ತರ(ಪಿಜಿ ಸೆಂಟರ್) ಕೇಂದ್ರವನ್ನು ಪ್ರತ್ಯೇಕ ವಿಶ್ವವಿದ್ಯಾಲಯವನ್ನಾಗಿ ಸ್ಥಾಪಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಯಾದಗಿರಿ, ರಾಯಚೂರು ಜಿಲ್ಲೆಗಳ ಒಳಗೊಂಡಂತೆ ರಾಯಚೂರು ವಿವಿ ಸ್ಥಾಪನೆಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿಯೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಪ್ರಸ್ತಾವನೆಗೆ ಕೆಲವೊಂದು ಅಡೆತಡೆ ಎದುರಾಗಿ ವಿವಿ ಸ್ಥಾಪನೆ ನೆನಗುದಿಗೆ ಬಿದಿತ್ತು. ಇದೀಗ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ಅಧಿನಿಯಮ 2020ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಸಂಸದೀಯ ವ್ಯವಹಾರ ಮತ್ತು ಶಾಸನ ರಚನ ಸಚಿವಾಲಯ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಇದರಿಂದ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಆಗುತ್ತಿದ್ದ ಶೈಕ್ಷಣಿಕ ಭಾರ ಕಡಿಮೆಯಾಗಲಿದೆ. ಅನವಶ್ಯಕವಾಗಿ ವಿಳಂಬವಾಗುತ್ತಿದ್ದ ಶೈಕ್ಷಣಿಕ ಚಟುವಟಿಕೆಗಳು ನಿಗದಿತ ಅವಧಿಯಲ್ಲಿ ಮುಗಿಸಲು ಅನುಕೂಲವಾಗಲಿದೆ.