ರಾಯಚೂರು:ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ.ಅವರನ್ನು ವರ್ಗಾವಣೆ ಮಾಡಿ ಗುರುವಾರ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿಯ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಶರತ್ ಬಿ. ಅವರನ್ನು ವರ್ಗಾವಣೆ ಸ್ಥಳ ನಿಗದಿ ಮಾಡದೇ ಕಾಯ್ದಿರಿಸಲಾಗಿದೆ. ಇತ್ತೀಚಿಗೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಿದಾಗ ಡಿಸಿ ಶರತ್ ಬಿ.ಅವರು ರೈತರ ಬಳಿಗೆ ಮನವಿ ಸ್ವೀಕರಿಸಲು ಬಾರದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು. ಇದರಿಂದ ರೊಚ್ಚಿಗೆದ್ದ ಚಾಮರಸ ಮಾಲಿಪಾಟೀಲ ನೇತೃತ್ವದ ರೈತ ಸಂಘ ಡಿಸಿ ಕಚೇರಿಗೆ ಮುತ್ತಿಗೆ ಹಾಕಿತ್ತು. ಈ ಘಟನೆ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ದೂರು ಸಲ್ಲಿಸಿದ್ದರು.
ರೈತರ ದೂರಿನ ಮೇರೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿ.ಶರತ್‌ರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.