ರಾಯಚೂರು: ಜಿಲ್ಲೆಯಲ್ಲಿ ಇಂದಿನಿಂದ ಮೇ.24 ವರೆಗೆ ಕಠಿಣ ನಿಯಮ ಜಾರಿಗೊಳಿಸಿದ್ದು, ಹತ್ತು ಗಂಟೆಯ ನಂತರ ಅನಾವಶ್ಯವಾಗಿ ತಿರುಗಾಡುತ್ತಿದ್ದ ವಾಹನಗಳ ಸೀಜ್ ಮಾಡಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಫೀಲ್ಡಿಗಿಳಿದು ವಾಹನ ತಪಾಸಣೆ ನಡೆಸಿದರು.
ರಾಜ್ಯದಲ್ಲಿ ಇಂದಿನ 15 ದಿನಗಳ ಲಾಕ್ಡೌನ್ ಜಾರಿಯಾಗಿದ್ದು, ಬೆಳಗ್ಗೆ 6 ರಿಂದ 10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಅನಾವಶ್ಯಕ ತಿರುಗಾಟಕ್ಕೆ, ಗುಂಪು ಸೇರುವುದು ನಿಷೇಧಿಸಿದ್ದು, ತರಕಾರಿ, ಆಹಾರ ಸಾಮಗ್ರಿಗಳನ್ನು ತರಲು ವಾಹನಗಳನ್ನು ಬಳಸದೇ ನಿಗದಿತ ಸಮಯದೊಳಗೆ ನಡೆದುಕೊಂಡು ಹೋಗಿ ತರಲು ಅವಕಾಶ ಕಲ್ಪಿಸಲಾಗಿದೆ.
ಆದರೂ ನಗರದ ಅಂಬೇಡ್ಕರ್ ವೃತದಲ್ಲಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನ, ಕಾರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು ತಪಾಸಣೆ ಮಾಡಿ ಅನಾವಶ್ಯಕ ತಿರುಗಾಡುತ್ತಿದ್ದ ಸುಮಾರು 50 ಹೆಚ್ಚು ವಾಹಗಳನ್ನು ಸೀಜ್ ಮಾಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಖರೀದಿಗೆ ಹತ್ತು ಗಂಟೆಯ ವರೆಗೆ ಸಮಯ ನಿಗದಿಪಡಿಸಿದ್ದು, ತದನಂತರ ಸೂಕ್ತ ಕಾರಣ ಇಲ್ಲದೇ ಅನಾವಶ್ಯಕ ತಿರುಗಾಟ ಸಂಪೂರ್ಣ ನಿಷೇಧಿಸಲಾಗಿದೆ. ಅನಗತ್ಯವಾಗಿ ತಿರುಗಾಡುವ ವಾಹನಗಳನ್ನು ಮುಂದಿನ 14 ದಿನಗಳವರೆಗೆ ಹಿಂತಿರುಗಿ ನೀಡುವುದಿಲ್ಲ. ದಂಡ ವಿಧಿಸುವುದರ ಜೊತೆಯಲ್ಲಿ ವಾಹನಗಳ ಮಾಲೀಕರ ವಿರುದ್ಧ ಪ್ರಕಣ ದಾಖಲಿಸಲಾಗುವುದು. ಜನರು ಸರ್ಕಾರದ ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡಬೇಕು, ಅನಾವಶ್ಯಕ ತಿರುಗಾಟ ನಿಲ್ಲಿಸಬೇಕು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.