ರಾಯಚೂರು : ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ವ್ಯವಸಾಯಕ್ಕೆ ನೀರು ಒದಗಿಸುವಂತೆ ಆಗ್ರಹಿಸಿ ಇಂದು (ಮಂಗಳವಾರ) ಸಿರವಾರ ಪಟ್ಟಣ ಬಂದ್ ಮಾಡಲಾಯಿತು. ಈ ಮೂಲಕ ರೈತರು, ರೈತ ಮುಖಂಡರು ಹಾಗು ರಾಜಕೀಯ ನಾಯಕರು ಪಕ್ಷಾತೀತವಾಗಿ ಹೋರಾಟ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದು ನೀರು ಬಿಡುಗಡೆಗೆ ಮನವಿ ಮಾಡಲಾಯಿತು.
ಜಿಲ್ಲೆಯ ಎಡಭಾಗದಲ್ಲಿ ವಿಶಾಲವಾಗಿ ಹರಿಯುತ್ತಿರುವ ತುಂಗಭದ್ರಾ ನದಿ ಜಿಲ್ಲೆಯ ಜೀವನಾಡಿ. ಎಡದಂಡೆ ಕಾಲುವೆ ನೀರಿನಿಂದ ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದರೆ ಎಡದಂಡೆ ನಾಲೆಯ ವ್ಯಾಪ್ತಿಗೆ ಬರುವಂತೆ ಕೊನೆಯ (ಕೆಳ) ಭಾಗದ ಕಾಲುವೆಗೆ ನೀರು ಹರಿಯದೇ ಇರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯ ಮಾನವಿ, ಸಿರವಾರ ಹಾಗೂ ರಾಯಚೂರು ತಾಲೂಕಿನಲ್ಲಿ ಹಾದುಹೋಗಿರುವ ತುಂಗಭದ್ರಾ ಎಡದಂಡೆ ನಾಲೆಯ ಡಿಸ್ಟ್ರಿಬ್ಯೂಟರ್ 76, 79, 80 ಸೇರಿದಂತೆ ಸಿರವಾರ ನೀರಾವರಿ ವಲಯದ ಡಿವಿಜನ್‌ಗೆ ಈಗಾಗಲೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ನೀರು ಹರಿಸಲಾಗಿದೆ. ನೀರು ಬಿಟ್ಟು 23 ದಿನಗಳು ಕಳೆದರೂ ಸಹ ಇದುವರೆಗೆ ಕೆಳಭಾಗಕ್ಕೆ ನೀರು ಹರಿದು ಬಂದಿಲ್ಲ. ಇದರಿಂದಾಗಿ ಇದೇ ನೀರು ನಂಬಿಕೊಂಡು ಭತ್ತ ನಾಟಿ ಮಾಡುವ ರೈತರ ಬದುಕು ಅತಂತ್ರಗೊಂಡಿದೆ. ಕೂಡಲೇ ಕೆಳ ಭಾಗದ ರೈತರಿಗೆ ನೀರು ಹರಿಸುವಂತೆ ರಾಜ್ಯ ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಆಗ್ರಹಿಸಿದ್ದಾರೆ.
ಸಲಹಾ ಸಮಿತಿಯ ನಿರ್ಧಾರದಂತೆ ಕಾಲುವೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಯಬೇಕಾಗಿತ್ತು. ಇದುವರೆಗೂ ನೀರು ಬಂದಿಲ್ಲ. ಕೊಪ್ಪಳ, ಗಂಗಾವತಿ, ವಡ್ಡರಹಟ್ಟಿ, ಕನಕಗಿರಿ ಸೇರಿದಂತೆ ಮೇಲ್ಭಾಗದಲ್ಲಿರುವ ರೈತರು ಅಕ್ರಮ ನೀರಾವರಿ ನಡೆಸುತ್ತಿದ್ದಾರೆ. ಜೊತೆಗೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡದೇ ಇರುವುದು ರೈತರಿಗೆ ಸಮಸ್ಯೆಯಾಗಿದೆ. ಈ ಸಂಬಂಧ ಅಧಿಕಾರಿಗಳನ್ನು ಕೇಳಿದರೂ ಸಮರ್ಪಕ ಉತ್ತರ ನೀಡದೇ ನೀರು ಹರಿಸುವುದರಲ್ಲಿ ವಿಫಲವಾಗಿದ್ದಾರೆ ಎಂದು ಅವರು ದೂರಿದರು.
ಸೋನಮಸೂರಿ ಭತ್ತ ನಾಟಿ ಮಾಡಿರುವ ರೈತರಿಗೆ ಈಗಾಗಲೇ ತಿಂಗಳಷ್ಟು ನೀರು ತಡವಾಗಿದೆ. ಇನ್ನಷ್ಟು ವಿಳಂಬವಾದರೆ ಬೆಳೆ ಬೆಳೆಯುವುದೇ ಕಷ್ಟ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಕೆಳಭಾಗದ ರೈತರಿಗೆ ನೀರು ಒದಗಿಸಬೇಕು. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ಇದೇ ವೇಳೆ ರೈತ ಮುಖಂಡ ಜೆ.ಶರಣಪ್ಪಗೌಡ ಮಾತನಾಡಿ, ಮುಂಗಾರು ಮಳೆಗೆ ತುಂಗಾಭದ್ರ ಡ್ಯಾಂ ತುಂಬಿದೆ. ತಕ್ಷಣ ರೈತರಿಗೆ ನೀರು ಕೊಡಬೇಕು. 90 ಟಿಎಂಸಿ ನೀರನ್ನು 23 ದಿನ ಬಿಟ್ಟರೂ ಕೂಡ ಸಿರವಾರ ಕೊನೆ ಭಾಗದ ರೈತರಿಗೆ ತಲುಪದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ: ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಮುಂದಾದ ಮಂಡ್ಯ ರೈತರು... ತಡೆದ ಪೊಲೀಸರು!