ರಾಯಚೂರು: ಕೊರೊನಾ ಹಿನ್ನೆಲೆ ರಾಜ್ಯ ಸರ್ಕಾರ ರೂಪಿಸಿದ ಮಾರ್ಗಸೂಚಿ ಅನ್ವಯ ಯಾವುದೇ ಆಡಂಬರವಿಲ್ಲದೇ, ಸರಳ ಹಾಗೂ ಭಕ್ತಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಕೊರೊನಾ ಹಿನ್ನೆಲೆ ಸಾರ್ವಜನಿಕವಾಗಿ ಸರಳವಾಗಿ ಹಬ್ಬ ಆಚರಣೆ ಮಾಡುವಂತೆ ಸರ್ಕಾರ ಆದೇಶಿಸಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.
ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿ ನಿಷೇಧ: ನಗರದ ಪ್ರಮುಖ ಸ್ಥಳಗಳಾದ ಕಲ್ಲಾನೆ ಗಣೇಶ, ಮಾವಿನ ಕರೆ ರಸ್ತೆ, ಹನುಮಾನ್ ಟಾಕೀಸ್, ಕಿಲ್ಲೇರ ಮಠ ಸೇರಿದಂತೆ ಬೆರಳೆಣಿಕೆಯಲ್ಲಿ ಮಾತ್ರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಎಲ್ಲೆಂದರಲ್ಲಿ ಗಣೇಶನನ್ನು ಕೂರಿಸುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.
ಕೆಲ ಗಣೇಶ ಮಂಡಳಿಗಳು ಒಂದೇ ದಿನಕ್ಕೆ ಪ್ರತಿಷ್ಠಾಪಿಸಿ, ನಿಮಜ್ಜನ ಮಾಡಿವೆ. ಜಿಲ್ಲಾಡಳಿತ ವಾರ್ಡ್ಗೆ ಒಂದು ಗಣೇಶನನ್ನು ಕೂರಿಸಲು ಅವಕಾಶ ನೀಡಿದೆ. ಸಾರ್ವಜನಿಕ ಸ್ಥಳಗಳ ಪ್ರತಿಷ್ಠಾಪಿಸುವ ಗಣಪತಿಗಳಿಗೆ 5 ದಿನ ಮಾತ್ರ ಅವಕಾಶ ಕಲ್ಪಿಸಿದೆ.
ರಾಯಚೂರು ಕೇಂದ್ರೀಯ ಗಜಾನನ ಸಮಿತಿ ಹಾಗೂ ಕಲ್ಲಾನೆ ಗಜಾನನ ಸಮಿತಿ ವತಿಯಿಂದ ಹಲವು ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಮಂಡಳಿ ಅಧ್ಯಕ ಶ್ರೀನಿವಾಸ್ ಪತಂಗೆ ಈಟಿವಿ ಭಾರತಕ್ಕೆ ತಿಳಿಸಿದರು.