ರಾಯಚೂರು: ಕೊರೊನಾದಿಂದ ದೇಶದ ಆರ್ಥಿಕತೆ ಆತಂಕಕಾರಿ ಸ್ಥಿತಿಯಲ್ಲಿದ್ದು, ವಲಸೆ ಕಾರ್ಮಿಕರು ಸೇರಿದಂತೆ 11 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಎಲ್ಲರಿಗೂ ಉದ್ಯೋಗ ನೀಡುವಂತೆ ಆಗ್ರಹಿಸಿ ಎಐಡಿವೈಓ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಮುಂದೆ ಪದಾಧಿಕಾರಿಗಳು ಸಹಿ ಸಂಗ್ರಹ ಅಭಿಯಾನ ನಡೆಸಿದರು. ಕೊರೊನಾ ಪ್ರಭಾವ, ಉದ್ಯೋಗ ಕಡಿತ ಒಂದಡೆಯಾದರೆ, ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇದ್ರೂ ಶಿಕ್ಷಣ, ಆರೋಗ್ಯ, ಸಾರಿಗೆ, ವಸತಿ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿ ನಡೆದಿಲ್ಲ.
ಖಾಯಂ ಸ್ವರೂಪ ಹುದ್ದೆಗಳಲ್ಲಿಯೂ ದಿನಗೂಲಿ, ಗುತ್ತಿಗೆ, ಅತಿಥಿಯಂತಹ ರೀತಿಯಲ್ಲಿ ನಿರುದ್ಯೋಗಿಗಳನ್ನು ನೇಮಿಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಮೋಸ ಮಾಡಲಾಗುತ್ತಿದೆ. ನೂರಾರು ಹುದ್ದೆಗಳ ಭರ್ತಿ ಎಂದು ಹೇಳಿ, ಅಮಾಯಕ ನಿರುದ್ಯೋಗಿಗಳಿಗೆ ಉದ್ಯೋಗದ ಆಸೆ ತೋರಿಸಿ ಅರ್ಜಿ ಶುಲ್ಕದ ಹೆಸರಿನಲ್ಲಿ ಅವರಿಂದಲೇ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರವು ವಸೂಲಿ ಮಾಡುತ್ತಿದೆ.
ಓದಿ:ನಮ್ಮದು ಶಿಸ್ತಿನ ಪಕ್ಷ.. ಯತ್ನಾಳ್ ವಿರುದ್ಧ ಶಿವರಾಜ್ ಪಾಟೀಲ್ ವಾಗ್ದಾಳಿ
ಅರ್ಜಿ ಶುಲ್ಕದ ಹೆಸರಿನಲ್ಲಿ ರೈಲ್ವೆ ಮಂಡಳಿಯು 2013 ರಿಂದ 2021 ವರೆಗೆ ನಿರುದ್ಯೋಗಿಗಳಿಂದಲೇ 1850.03 ಕೋಟಿ ರೂ. ಸಂಗ್ರಹಿಸಿದೆ. ಕೇಂದ್ರ ಸರ್ಕಾರ ದೇಶದ ಜನತೆಗೆ ಮೋಸ ಮಾಡುತ್ತಿದ್ದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ ಭರವಸೆ ಹುಸಿಯಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದೆ, ಯುವಕರು ಕೆಲಸವಿಲ್ಲದೇ ಪರದಾಡುವಂತಾಗಿದೆ. ಕೇಂದ್ರ ಸರ್ಕಾರ ಮಾತ್ರ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಉದ್ಯೋಗದ ಹಕ್ಕನ್ನು ಮೂಲ ಹಕ್ಕು ಎಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.