ರಾಯಚೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರಾಯರ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಜನತೆಗೆ ಕರೆ ಕೊಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಜೆೊತೆಜೊತೆಗೆ ನಡೆಯುತ್ತಿದೆ. ಈ ವೇಳೆ ಮಂತ್ರಾಲಯದ ಎಂಪಿಪಿ ಎಲಿಮೆಂಟ್ರಿ ಶಾಲೆಯ ಬೂತ್ ಸಂಖ್ಯೆ-67ರಲ್ಲಿ ಶ್ರೀ ಸುಭುದೇಂದ್ರ ತೀರ್ಥರು ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂವಿಧಾನಬದ್ಧವಾಗಿ ಪ್ರತಿಯೊಬ್ಬರಿಗೆ ನೀಡಿರುವ ಮತದಾನ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದರು.
ಜನರು ತಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಮಾರಾಟ ಮಾಡಬಾರದು. ಸೂಕ್ತ ಎನಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಜವಾಬ್ದಾರಿ ನಿಭಾಯಿಸಬೇಕೆಂದು ಸ್ವಾಮೀಜಿ ಹೇಳಿದರು.
ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ, ಇದೇ ಮೊದಲ ಬಾರಿಗೆ ಮತ ಚಲಾಯಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಮತದಾನ ಮಾಡಲು ತೆರಳಿದ ವೇಳೆ ಶ್ರೀಗಳಿಗೆ ಮಠದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಥ್ ಕೊಟ್ಟರು.