ರಾಯಚೂರು: ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ನೆನೆದ ಪರಿಣಾಮ ಸುಮಾರು 370 ಕ್ಕೂ ಅಧಿಕ ಕುರಿಗಳು ಮೃತಪಟ್ಟಿವೆ.
ಕಳೆದ ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ಮರ್ಚೆಡ್ ಗ್ರಾಮದ ಕುರಿಗಾಹಿ ಕುಟುಂಬಗಳ 16 ಸದಸ್ಯರಿಗೆ ಸೇರಿದ 370 ಕ್ಕೂ ಅಧಿಕ ಕುರಿಗಳು ಮೃತಪಟ್ಟಿದ್ದು, ಕೋಟ್ಯಂತರ ರೂ. ಹಾನಿ ಸಂಭವಿಸಿದೆ.
ಕುರಿಗಾಹಿಯ ಒಂದೇ ಕುಟುಂಬದ 16 ಸದಸ್ಯರು 3 ಸಾವಿರ ಕುರಿ ಸಾಕಾಣಿಕೆ ಮಾಡಿ ತಮ್ಮ ಕುಟುಂಬಗಳನ್ನು ಪೋಷಣೆ ಮಾಡುತ್ತಿದ್ದರು. ಕಳೆದ ವಾರ ಸುರಿದ ಮಳೆಯಿಂದ ಕುರಿಗಳು ಅನಾರೋಗ್ಯಕ್ಕೆ ಒಳಗಾಗಿ ಸಾವಿಗೀಡಾಗಿವೆ.
ಕುರಿಗಳು ಅನಾರೋಗ್ಯ ಪೀಡಿತವಾಗಿ ಮೇಯಲು ಆಗದೆ, ಒಂದು ಸ್ಥಳದಲ್ಲಿ ಕುಳಿತಲ್ಲೇ ಮೃತಪಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೃತಪಟ್ಟಿರುವ ಒಂದು ಕುರಿಗೆ ₹ 5 ಸಾವಿರ ಪರಿಹಾರ ನೀಡಬೇಕು ಹಾಗೂ ಉಳಿದ ಕುರಿಗಳ ಆರೋಗ್ಯ ತಪಾಸಣೆ ಮಾಡಬೇಕು ಎಂದು ಕುರಿಗಾಹಿ ಕುಟುಂಬದ ಸದಸ್ಯ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.