ರಾಯಚೂರು: ದೇಶಾದ್ಯಂತ ಈಗ ರಾಮನಾಮ ಸ್ಮರಣೆ ನಡೆಯುತ್ತಿದೆ. ಐತಿಹಾಸಿಕ ಭವ್ಯ ದೇಗುಲ ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆಗೆ ಎಲ್ಲರೂ ಕಾತುರರಾಗಿದ್ದಾರೆ. ಮಂದಿರ ನಿರ್ಮಾಣಕ್ಕೆ ಹಲವಾರು ಶಿಲ್ಪ ಕಲಾವಿದರು ಸೇವೆ ಸಲ್ಲಿಸಿದ್ದಾರೆ. ಈ ಪೈಕಿ ಬಿಸಿಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಯುವ ಶಿಲ್ಪಿ ವೀರೇಶ್ ಬಡಿಗೇರ್ ಕೂಡ ಒಬ್ಬರು. ತಿಂಗಳ ಕಾಲ ನಿರ್ಮಾಣ ಕಾಯಕದಲ್ಲಿ ತೊಡಗಿ, ಇದೀಗ ಸ್ವಗ್ರಾಮಕ್ಕೆ ಮರಳಿದ್ದಾರೆ.
ಶಿಲ್ಪಿ ವೀರೇಶ್ ಬಡಿಗೇರ್ ರಾಮ ಮಂದಿರದ ಮಂಟಪಗಳ ಕುಸರಿ ಕೆಲಸಗಳನ್ನು ಮಾಡಿದ್ದು, ಪಿಲ್ಲರ್‌ಗಳಿಗೆ ನವಿಲು, ಹಂಸಪಕ್ಷಿಗಳ ವಿನ್ಯಾಸ ಮಾಡಿದ್ದಾರೆ. ಹಿರಿಯ ಶಿಲ್ಪಿಯೊಬ್ಬರ ಮುಖಾಂತರ ಇವರಿಗೆ ನಿರ್ಮಾಣ ಕೆಲಸದಲ್ಲಿ ಅವಕಾಶ ದೊರೆತಿದೆತು. ತದನಂತರ ಗ್ರಾಮಸ್ಥರ ಸಹಕಾರದಿಂದ ಅಯೋಧ್ಯೆಗೆ ತೆರಳಿ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ಶಿಲ್ಪಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ತಮ್ಮ ಗ್ರಾಮದ ಯುವ ಶಿಲ್ಪಿ ರಾಮ ಮಂದಿರ ನಿರ್ಮಾಣದಲ್ಲಿ ತನ್ನ ಸೇವೆ ಸಲ್ಲಿಸಿರುವುದು ಗ್ರಾಮ ಜೊತೆಗೆ ಇಡೀ ಜಿಲ್ಲೆಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶ್ರೀರಾಮನ ಆಶೀರ್ವಾದವೇ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸರಿಸುಮಾರು ಕಳೆದ ಹತ್ತು ವರ್ಷಗಳಿಂದ ನಾನಾ ಬಗೆಯ ವಿನ್ಯಾಸ, ಮೂರ್ತಿಗಳನ್ನು ಕೆತ್ತನೆ ಮಾಡಿರುವ ಶಿಲ್ಪಿ ವೀರೇಶ್ ಮಾತನಾಡಿ, "ರಾಮ ಮಂದಿರ ನಿರ್ಮಾಣದಲ್ಲಿ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಮಾರ್ಚ್ ತಿಂಗಳಲ್ಲಿ ಪುನಃ ಅಯೋಧ್ಯೆಗೆ ತೆರಳಿ ಮತ್ತಷ್ಟು ಕುಸರಿ ಕೆಲಸಗಳನ್ನು ಮಾಡುತ್ತೇನೆ" ಎಂದು ಸಂತಸ ಹಂಚಿಕೊಂಡರು. ಅಯೋಧ್ಯೆಯಲ್ಲಿ ಸೇವೆ ಮಾಡಿ ಬಂದಿರುವ ವೀರೇಶ್ ಬಡಿಗೇರ್ ಅವರನ್ನು ಗ್ರಾಮಸ್ಥರು ಶಾಲು ಹೊದಿಸಿ ಗೌರವಿಸಿದರು.
ಇದನ್ನೂ ಓದಿ: ಶ್ರೀರಾಮ ಮೂರ್ತಿ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯ: 'ಅಳಿಲು ಸೇವೆಯ ಧನ್ಯತೆ'