ರಾಯಚೂರು: ಪ್ರಸ್ತುತ ದಿನಗಳಲ್ಲಿ ಮನೆಯಿಂದ ಹೊರಬಂದು ಕೆಲಸಕ್ಕೆ ಹೋಗಲು ಚಿಂತಿಸುವ ಮಹಿಳೆಯರ ಮಧ್ಯೆ ಇಲ್ಲೊಬ್ಬ ಯುವತಿ ದಿಟ್ಟತನದಿಂದ ದೇಶಕ್ಕಾಗಿ ಸೇನೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಎಸ್‌ಎಫ್ ಮೂಲಕ ಸೇನೆಗೆ ಸೇರಿ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ದಳ) ಮಹಿಳಾ ಕಮಾಂಡೋ ಆಗಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಅಮರಾಪುರ ಗ್ರಾಮದ ರೇಣುಕಾ ಅವರು ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.
ರೇಣುಕಾ ಅವರದು ಹೇಳಿಕೊಳ್ಳುವಂತಹ ದೊಡ್ಡ ಕುಟುಂಬವಲ್ಲ. ತಂದೆ ಒಕ್ಕಲುತನ ಹಾಗೂ ತಾಯಿ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬರುವ ಅಲ್ಪ ಆದಾಯದಲ್ಲೇ ರೇಣುಕಾ ಹಾಗೂ ತಂಗಿ ರಾಧಿಕಾರನ್ನು ಓದಿಸಿದ್ದಾರೆ.
ರೇಣುಕಾ ಓದುತ್ತಿರುವಾಗಲೇ ಎನ್ಎಸ್ಎಸ್ ಸೇರಿದ್ದರು. 2014ರಲ್ಲಿ ಸೈನ್ಯಕ್ಕೆ ಸೇರಿದ್ದ ರೇಣುಕಾ, ದೇಶದ ನಾನಾ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸಾಮರ್ಥ್ಯ ಪ್ರದರ್ಶಿಸಿ ಎನ್‌ಎಸ್‌ಜಿಗೆ ಆಯ್ಕೆಯಾಗಿದ್ದಾರೆ. ರೇಣುಕಾ ಜೊತೆಗೆ ವಿಜಯಪುರ ಜಿಲ್ಲೆಯ ಎನ್.ಕೆ.ಸುಮಂಗಲ ಅವರೂ ಆಯ್ಕೆಯಾಗಿದ್ದಾರೆ.
ರೇಣುಕಾಗೆ ಮದುವೆ ಮಾಡಿಸಿದ ಬಳಿಕ ಸೈನ್ಯ ಸೇವೆಯಿಂದ ಹಿಂದೆ ಸರಿದಿದ್ದರು. ಪತಿ ಹಾಗೂ ಪೋಷಕರು ಪ್ರೋತ್ಸಾಹದಿಂದಾಗಿ ಸೈನ್ಯದಲ್ಲಿ ಕೆಲಸ ಮುಂದುವರೆಸಿದ್ದಾರೆ. ಪತ್ನಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಪತ್ನಿ ಕೆಲಸ ಮಾಡುವ ಸ್ಥಳದಲ್ಲಿದ್ದರು. ಪತಿ ಸ್ವಗ್ರಾಮಕ್ಕೆ ಆಗಮಿಸಿ ಒಕ್ಕಲುತನ ಮಾಡಿಕೊಂಡಿದ್ದಾರೆ. ರೇಣುಕಾ ಸೈನ್ಯಕ್ಕೆ ಸೇರಿದ್ದನ್ನು ಕಂಡು ಗ್ರಾಮಸ್ಥರು ಆಡಿಕೊಂಡರು. ಇದಕ್ಕೆಲ್ಲಾ ತಾಯಿ ಕಿವಿಗೊಡದೆ, ಎಚ್ಚರದಿಂದ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.