ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಭೀತಿ ಹಿನ್ನೆಲೆ 227 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸದ್ಯ ಆ ವರದಿ ಜಿಲ್ಲಾಡಳಿತದ ಕೈ ಸೇರಿದ್ದು 227 ಜನರ ವರದಿಯೂ ನೆಗೆಟಿವ್ ಬಂದಿದ್ದು, ರಾಯಚೂರು ಜನತೆ ನಿರಾಳರಾಗಿದ್ದಾರೆ.
ಇದರಿಂದಾಗಿ ಈವರೆಗೆ ಒಟ್ಟು 324 ಜನರ ವರದಿ ನೆಗೆಟಿವ್ ಎಂದು ಬಂದಂತಾಗಿದೆ. ಜಿಲ್ಲೆಯಿಂದ ಇದುವರೆಗೂ 754 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರಲ್ಲಿ 324 ಜನರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ಮತ್ತು ಜನರಿಗೆ ಸಮಾಧಾನ ತಂದಿದೆ. ಇಂದು 38 ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಇನ್ನೂ 425 ಜನರ ವರದಿ ಪ್ರಯೋಗಾಲಯದಿಂದ ಬರಬೇಕಾಗಿದೆ.
ಸ್ಥಳೀಯ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ 45 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ 37 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಹೊರ ರಾಜ್ಯದಿಂದ ಬಂದ 448 ಜನರನ್ನು ಸರ್ಕಾರಿ ಕಟ್ಟಡದಲ್ಲಿ ದಿಗ್ಬಂಧನದಲ್ಲಿರಿಸಲಾಗಿದ್ದು, ಕ್ವಾರಂಟೈನ್ನಲ್ಲಿದ್ದ 320 ಜನರನ್ನು ಅವಧಿ ಮುಗಿದ ಕಾರಣಕ್ಕೆ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.