ರಾಯಚೂರು: ಕರ್ನಾಟಕ, ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ದೇವಸೂಗುರಿನ ಕೃಷ್ಣ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಫೆಬ್ರವರಿ 22ರಿಂದ 25ರವರೆಗೆ ನಾಲ್ಕು ದಿನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ರಾಯಚೂರು ತಾಲೂಕಿನ ದೇವಸೂಗೂರು (ಶಕ್ತಿನಗರ 2ನೇ ಕ್ರಾಸ್) ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಪುರಾತನ ಸೇತುವೆಯ ಮೇಲೆ ಹಾದು ಹೋಗಿರುವ ಎನ್.ಹೆಚ್.167 ಮೇಲೆ ಸಂಚಾರಕ್ಕೆ ನಿರ್ಭಂಧವಿದೆ.
ರಾಯಚೂರುನಿಂದ ಹೈದಾರಾಬಾದ್ಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗವಾಗಿ ರಾಯಚೂರು ನಗರದ ಗಂಜ್ ವೃತ್ತದಿಂದ ತೆಲಂಗಾಣದ ಗದ್ವಾಲ್ ಜಿಲ್ಲೆಯಿಂದ ತೆರಳಬಹುದು. ರಾಯಚೂರಿನಿಂದ ಯಾದಗಿರಿ - ಕಲಬುರಗಿ ಕಡೆಗೆ ಹೋಗುವ ವಾಹನಗಳು ರಾಯಚೂರು ನಗರ ಸಾಥ್(7)ಮೈಲ್, ಕಲಮಲಾ, ದೇವದುರ್ಗ, ಹೂವಿನಹೆಡಗಿ ಸೇತುವೆ ಮಾರ್ಗವಾಗಿ ಸಂಚರಿಸಬೇಕು.
ನಿಜಾಮರ ಕಾಲದಲ್ಲಿ ನಿರ್ಮಿಸಲಾಗಿರುವ ಸೇತುವೆ ಕೆಲ ವರ್ಷಗಳಿಂದ ಶಿಥಿಲಗೊಂಡಿದೆ. ಬಳಿಕ ಸರಿಪಡಿಸಲಗಿತ್ತು. ಇದೀಗ ಸೇತುವೆ ಮೇಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 167 ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಸೇತುವೆ ಮಾರ್ಗವಾಗಿ ಘನ ವಾಹನಗಳು, ಬಸ್ ಸೇರಿದಂತೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿರುತ್ತವೆ.
ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು ವ್ಯಾಪಾರ-ವಹಿವಾಟಿಗಾಗಿ ಪ್ರತಿನಿತ್ಯ ರಾಯಚೂರು ಜಿಲ್ಲೆ ಸೇರಿದಂತೆ ಸುತ್ತಲ ಊರುಗಳಿಂದ ಹೈದರಾಬಾದ್ಗೆ ತೆರಳುವವರ ಸಂಖ್ಯೆ ಬಹಳಷ್ಟಿದೆ. ಅಲ್ಲದೇ ಹೈದರಾಬಾದ್ ಮೂಲಕ ರಾಜ್ಯಕ್ಕೆ ಆಗಮಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಇದೀಗ ರಸ್ತೆ ದುರಸ್ತಿ ಕಾರಣದಿಂದ ಗದ್ವಾಲ್ ಮೂಲಕ ಹೈದರಾಬಾದ್ಗೆ ವಾಹನಗಳು ಸಂಚಾರಿಸಬೇಕಿದೆ. ಇದರಿಂದಾಗಿ ಪ್ರಯಾಣದ ಸಮಯ ಹೆಚ್ಚಾಗುತ್ತದೆ.
ಇದನ್ನೂ ಓದಿ: ಪಾಳು ಬಿದ್ದ ರಸ್ತೆ.. ದುರಸ್ತಿ ಕಾರ್ಯಕ್ಕಾಗಿ ಮದುವೆಗೆ ಕೂಡಿಟ್ಟಿದ್ದ ಹಣವನ್ನೇ ಕೊಟ್ಟ ಐಟಿ ಉದ್ಯೋಗಿ