ರಾಯಚೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕಿನ ಪರಿಣಾಮ ದೇಶದಲ್ಲಿ ಲಾಕ್ಡೌನ್ ಮಾಡಲಾಗಿದೆ. ಇದರ ಪರಿಣಾಮ ಬಿಸಿಲೂರು ಜಿಲ್ಲೆಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳಿ ಸಂಕಷ್ಟ ಎದುರಿಸುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರು ವಾಪಸ್ತವರು ಸೇರಿದ್ದಾರೆ.
ಜಿಲ್ಲೆಯಿಂದ ಕೆಲಸಕ್ಕಾಗಿ ವಲಸೆ ಹೋಗಿದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಮರಳಿ ತಮ್ಮ ಗೂಡು ಸೇರಿದ್ದಾರೆ. ಕೂಲಿ ಮಾಡಿಕೊಂಡು ಬಂದ ಹಣದಲ್ಲಿ ಜೀವನ ಸಾಗಿಸುವ ಜನರಿಗೆ ಲಾಕ್ಡೌನ್ ಭಾರಿ ಸಂಕಷ್ಟ ತಂದಿದ್ದು, ಮುಂದೆ ಏನು ಎಂಬ ಚಿಂತೆಯಲ್ಲಿ ಕೂಲಿ ಕಾರ್ಮಿಕರಿದ್ದಾರೆ.
ಸದ್ಯ ಮರಳಿ ಬಂದ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ನೀಡಿ ಜನಸಂದಣಿಯಾಗದಂತೆ ಯೋಜನೆ ರೂಪಿಸಿ ಕೆಲಸ ನೀಡಲು ಜಿಲ್ಲಾ ಪಂಚಾಯಿತಿ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಗುಳೆ ಹೋದ ಕೆಲವರಲ್ಲಿ ಜಾಬ್ ಕಾರ್ಡ್ ಇದ್ದು, ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಜಾಬ್ ಕಾರ್ಡ್ ಜಿಲ್ಲಾ ಪಂಚಾಯಿತಿ ನೀಡಲಿದೆ. ಆದ್ರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಂತೆ ಗುಳೆ ಹೋಗುವುದನ್ನ ತಪ್ಪಿಸಲು ಸ್ಥಳೀಯವಾಗಿ ಕೆಲಸ ನೀಡಬೇಕಾಗಿದ್ದು, ಅದನ್ನ ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ.