ರಾಯಚೂರು: ಆಗಸ್ಟ್ 26ರಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಮರಳುವಾಗ ಟಂಟಂ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.
ಸಿರವಾರ ತಾಲೂಕಿನ ಕುರಕುಂದಾದಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಲುವಾಗಿ ಸಿರವಾರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಚಾರ್ಯ ಹೇಮಣ್ಣ ಹಾಗೂ ದೈಹಿಕ ಶಿಕ್ಷಕ ಸಂತೋಷ್ ಎಂಬವರ ಜೊತೆ ತೆರಳಿದ್ದರು. ಕ್ರೀಡಾಕೂಟ ಮುಗಿಸಿ ಮರಳುವಾಗ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಟಂಟಂ ವಾಹನ ಪಲ್ಟಿಯಾಗಿತ್ತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರಲ್ಲಿ ಮಾಚನೂರಿನ ದೀಪಾ, ಲಿಂಗಸುಗೂರು ಅಡವಿ ಅಮರೇಶ್ವರದ ಚಾಮುಂಡಿ ಹಾಗೂ ಗುಡದಿನ್ನಿಯ ಸುನೀತಾ ಎಂಬ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿತ್ತು.
ಘಟನೆಯ ಬಳಿಕ ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿದ್ದ ಪ್ರಾಚಾರ್ಯ ಹೇಮಣ್ಣ ಹಾಗು ದೈಹಿಕ ಶಿಕ್ಷಕ ಸಂತೋಷ್ ಎಂಬವರನ್ನು ಅಮಾನತು ಮಾ ಡಲಾಗಿತ್ತಾದರೂ, ಕೆಲ ದಿನಗಳ ನಂತರ ಹೇಮಣ್ಣ ಅವರನ್ನು ಸಿರವಾರದ ಇಂದಿರಾಗಾಂಧಿ ಶಾಲೆಗೆ ಹಾಗೂ ಸಂತೋಷ್ ಅವರನ್ನು ಜೇವರ್ಗಿ ತಾಲೂಕಿಗೆ ವರ್ಗಾಯಿಸಲಾಗಿದೆ. ಆದರೆ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮಾತ್ರ ಇನ್ನೂ ಚೇತರಿಸಿಕೊಳ್ಳದೆ, ಇತ್ತ ಸೂಕ್ತ ಚಿಕಿತ್ಸೆಯೂ ಸಿಗದೆ ಪರದಾಡುತ್ತಿದ್ದಾರೆ.
ಘಟನೆಯಲ್ಲಿ ಕೈ ಕಳೆದುಕೊಂಡ ವಿದ್ಯಾರ್ಥಿನಿ ದೀಪಾ ಪ್ರತಿಕ್ರಿಯಿಸಿದ್ದು, ಅಪಘಾತ ನಡೆದ ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನಿಸಲಾಗಿತ್ತು. ಅಲ್ಲಿ ಕೈಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿತ್ತು. ಆದ್ರೆ ಆ ಸಮಯದಲ್ಲಿ ರಕ್ತ ಕಡಿಮೆಯಿರುವ ಕಾರಣ ತಕ್ಷಣವೇ ರಕ್ತ ಬೇಕೆಂದು ವೈದ್ಯರು ಹೇಳಿದ್ದರು. ಆದ್ದರಿಂದ ನಮ್ಮ ತಂದೆ ಶಾಲೆಯ ಪ್ರಾಚಾರ್ಯರಿಗೆ ಫೋನ್ ಮಾಡಿದರೆ ಸ್ಪಂದಿಸಲಿಲ್ಲ. ಇದರಿಂದ ತ್ವರಿತ ಚಿಕಿತ್ಸೆ ದೊರೆಯದೆ ಕೈಯಲ್ಲಿ ಕೀವು ತೊಂಬಿಕೊಂಡು ಆಪರೇಶನ್ ಸಾಧ್ಯವಾಗದೆ ರಾಡ್ ಹಾಕಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಮಗೆ ಈ ಶಿಕ್ಷೆಯಾಗಿದೆ. ಚಿಕಿತ್ಸೆಗೆ ಅಗತ್ಯ ನೆರವು ಸಿಕ್ಕಿಲ್ಲ, ಸಚಿವರು ನೆರವು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾಳೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಮಕ್ಕಳ ಚಿಕಿತ್ಸೆಗೆ ಚಿಕಿತ್ಸಾ ವೆಚ್ಚ ಹಾಗೂ ಅಗತ್ಯ ಪರಿಹಾರ ನೀಡಲು ಡಿಸಿ, ಜಿ.ಪಂ. ಸಿಇಓಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.