ರಾಯಚೂರು: ಶೈಕ್ಷಣಿಕ ಹಾಗೂ ಆರೋಗ್ಯ ಕೇತ್ರಗಳಲ್ಲಿ ಹಿಂದುಳಿದಿರುವ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಇದೀಗ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕು ಎಂಬ ದೃಢ ಸಂಕಲ್ಪ ಮಾಡಿ ರಾಯಚೂರು ಏಮ್ಸ್ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರುವ ಮೂಲಕ ಹೊಸ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು ನಾಂದಿ ಹಾಡಿವೆ.
ಈ ಹಿಂದೆ ಐಐಟಿ ಹೋರಾಟದ ಸಮಯದಲ್ಲಿ ಸಂಘಟನೆಗಳು ರಾಜಕೀಯ ನಾಯಕರಿಗೆ ಐಐಟಿ ಕುರಿತು ಮನವೊಲಿಸುವಲ್ಲಿ ವಿಫಲವಾದ ಹಿನ್ನೆಲೆ ಜಿಲ್ಲೆಯಿಂದ ಕೈ ತಪ್ಪಲು ಕಾರಣವಾಯಿತು ಎಂಬುವುದನ್ನು ಮನಗಂಡಿರುವ ಹೋರಾಟಗಾರರು ಶತಾಯ-ಗತಾಯ ಹೇಗಾದ್ರೂ ಮಾಡಿ ರಾಜಕೀಯ ಜನಪ್ರತಿ ನಿಧಿಗಳಲ್ಲಿ ಇರುವ ಪಕ್ಷ ಭೇದ ಬದಿಗಿಟ್ಟು, ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕರೆತರಲು ಕಾರ್ಯ ಯೋಜನೆ ಮಾಡಿಕೊಳ್ಳಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಹೋರಾಟದ ರೂಪುರೇಷೆಗಳು ತಯಾರಾಗುತ್ತಿವೆ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಜೆಲ್ಲೆಯ ಹೆಸರು ಮಾತ್ರ ಏಮ್ಸ್ ಸ್ಥಾಪನೆಗೆ ಶಿಫಾರಸು ಮಾಡಿಸುವ ನಿಟ್ಟಿನಲ್ಲಿ ರಾಜಕೀಯ ಒತ್ತಡ ತಂತ್ರಗಳನ್ನು ಅನುಸರಿಸಲು ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.
ಜಿಲ್ಲೆಗೆ ಏಮ್ಸ್ ಪಡೆಯಲು ಅರ್ಹತೆ ಮತ್ತು ಕಾರಣಗಳ ಬಗ್ಗೆ ಮಾಹಿತಿ ಕಲೆ ಹಾಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಜ್ಜಾಗಿದ್ದು, ಅಲ್ಲದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಜಿಲ್ಲೆಯು ಒಂದಾಗಿದ್ದನ್ನು ಮುಂದೆ ಇಟ್ಟುಕೊಂಡು ಹೋರಾಟ ರೂಪಿಸಲಾಗುತ್ತಿದೆ.
ಏಮ್ಸ್ ಹೋರಾಟ ಸಮಿತಿ ಮುಖಂಡರಾದ ರಾಘವೇಂದ್ರ ಕುಷ್ಟಗಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿದ್ದು, ಡಾ.ನಂಜುಡಪ್ಪ ವರದಿ ಪ್ರಕಾರ ಜಿಲ್ಲೆಗೆ ಐಐಟಿ ಮಂಜೂರು ಆಗಬೇಕಾಗಿತ್ತು. ಆದರೆ ರಾಜಕೀಯ ನಾಯಕರಿಂದ ನಮಗೆ ಅನ್ಯಾಯವಾಗಿದ್ದು, ಏಮ್ಸ್ ಜಿಲ್ಲೆಗೆ ಮಂಜೂರಾತಿ ಮಾಡಿಸಿ ಕೊಡುವ ಮೂಲಕ ಹಿಂದೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಜಿಲ್ಲೆಯ ಜನ ಪ್ರತಿನಿಧಿಗಳು ತಮ್ಮ ಜನಪತ್ರಿನಿಧಿತ್ವ ಸಾಬೀತು ಪಡೆಸುವ ಸಮಯ ಬಂದಿದ್ದು, ಎಲ್ಲಾ ಪ್ರತಿನಿಧಿಗಳು ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಜಿಲ್ಲೆಗೆ ಏಮ್ಸ್ ತರಲು ಒಂದಾಗಿ ಹೋರಾಟ, ಒತ್ತಡ ತರಬೇಕು ಎಂದರು
ಏಮ್ಸ್ ಹೋರಾಟ ಸಮಿತಿ ಸಂಚಾಲಕರಾದ ಬಸವರಾಜ ಕಳಸ ಮಾತನಾಡಿ, ಸೆ.16 ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು, ಸೆ.17 ರಂದು ಜಿಲ್ಲೆಗೆ ಆಗಮಿಸುತ್ತಿರುವ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರೊಂದಿಗೆ ಸಮಿತಿ ಸದಸ್ಯರು ಚರ್ಚಿಸಲಿದ್ದು, ಜಿಲ್ಲೆಗೆ ಏಮ್ಸ್ ತರುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ಹೆಸರು ಮಾತ್ರ ಸೂಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು, ಕಳೆದ ಬಾರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದರು.