ರಾಯಚೂರು: ತಾಲೂಕಿನ ಕೃಷ್ಣಾ ನದಿ ದಡದಲ್ಲಿ ಇರುವ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಪ್ರಗತಿ ಕುರಿತು ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ವ್ಯಸ್ಥಾಪಕ ಹೆಚ್.ಎಸ್.ಪ್ರಕಾಶ ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ತಾಲೂಕಿನ ಚಂದ್ರಬಂಡಾ ಹೋಬಳಿಯ ಕೃಷ್ಣಾ ನದಿಯ ನಡುಗಡ್ಡೆಗಳಾದ ಕುರ್ವಕುಂದಾ, ಕುರ್ವಕಲಾ, ಅಗ್ರಹಾರ (ದತ್ತ ಪೀಠ) ಮಂಗಿಗಡ್ಡೆ, ನಾರದಗಡ್ಡೆಯ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಕಾಮಗಾರಿ ಪ್ರಗತಿ ಹಾಗೂ ಸೇತುವೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಸ್ಥಗಿತಗೊಂಡ ಸೇತುವೆ ಪರಿಶೀಲಿಸಿದರು.
ಈಗಾಗಲೇ ನಿರ್ಮಾಣ ಹಂತದ ಸೇತುವೆಗಳು ಪ್ರವಾಹದಲ್ಲಿ ಮುಳುಗುವ ಸಾಧ್ಯತೆ ಇದ್ದು, ಅದರ ಎತ್ತರ ಎರಡರಿಂದ ಮೂರು ಮೀಟರ್ ಹೆಚ್ಚಿಸಲು ಮುಂದಿನ ಮೂರು ಹಂತದಲ್ಲಿ ಸರ್ವೇ ಕಾರ್ಯ ನಡೆಯಲಿದೆ. ಇಲ್ಲಿಯವರಗೆ ಬಂದ ಪ್ರವಾಹದಲ್ಲಿ ಮುಳುಗಡೆಯಾದ ಪ್ರದೇಶದ ಆಧಾರದ ಮೇಲೆ ನಿರ್ಧಾರವಾಗಲಿದೆ. ಮುಂದಿನ 45 ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಡಿ.ರಾಂಪೂರು- ಕುರ್ವಕುದಾ, ಅತ್ಕೂರು- ಕುರ್ವಕುಂದಾ ಗ್ರಾಮಗಳಿಗೆ ಜನ, ಜಾನುವಾರುಗಳು ತೆರಳುವುದಕ್ಕೆ ಸೇತುವೆ ನಿರ್ಮಿಸುವ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬೂರ್ದಿಪಾಡು ಗ್ರಾಮದಿಂದ ನಾರದಗಡ್ಡೆ ದೇವಸ್ಥಾನಕ್ಕೆ ತೆರಳುವ ಹೊಸ ಸೇತುವೆ ಕಾಮಗಾರಿ ಆರಂಭಿಸುವ ಬಗ್ಗೆ ಸಹ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಅಪೂರ್ಣಗೊಂಡಿರುವ ಎರಡು ಸೇತುವೆ ಕಾಮಗಾರಿಯನ್ನು ಕಬ್ಬಿಣದಿಂದ ನಿರ್ಮಾಣ ಮಾಡಬೇಕೇ ಅಥವಾ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ತಜ್ಞರ ನೇತೃತ್ವದ ತಂಡ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.