ರಾಯಚೂರು: ಸಂಚಾರಿ ನಿಯಮಗಳ ಪಾಲನೆ ಮಾಡುವುದು ವಾಹನ ಸವಾರರ ಕರ್ತವ್ಯ. ಅದನ್ನು ಬ್ರೇಕ್ ಮಾಡಿದರೆ ಪೊಲೀಸರು ದಂಡ ಹಾಕುವುದು ಸಾಮಾನ್ಯ. ಆದ್ರೆ ಇಂದು ರಾಯಚೂರಿನಲ್ಲಿ ಆಗಿದ್ದೇ ಬೇರೆ.
ಹೌದು, ನಗರದ ಚಂದ್ರಮೌಳೇಶ್ವರ ವೃತ್ತ, ಮಹಾವೀರ್ ವೃತ್ತ, ತೀನ್ ಖಂದಿಲ್ ಚೌಕ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಹಾಗೂ ಸಂಚಾರಿ ಪೊಲೀಸರ ತಂಡ ಒನ್ ವೇ, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿದವರನ್ನು ತಡೆದು ದಂಡ ಹಾಕದೇ ಸಸಿ ನೀಡಿದರು. ಅಷ್ಟೇ ಅಲ್ಲದೆ ಆ ಸಸಿಯನ್ನು ನೆಟ್ಟು ಹೆಮ್ಮರವಾಗಿ ಬೆಳೆಸುವ ಪ್ರತಿಜ್ಞೆ ಮಾಡಿಸಿದ್ದಾರೆ.
ದಂಡ ಹಾಕಿ ಹಾಕಿ ಸಾಕಾಗಿದ್ದು, ಸಂಚಾರಿ ನಿಯಮಗಳ ಪಾಲನೆ ಮಾಡುತ್ತಿಲ್ಲ. ಅಲ್ಲದೆ ನಗರವನ್ನು ಹಸಿರಾಗಿಸಲು ಈ ಮಾರ್ಗ ಅನುಸರಿಸುತಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಕ್ಕೆ ಗ್ರೀನ್ ರಾಯಚೂರ್ ಸಂಘ ಸಸಿಗಳ ಸಹಾಯ ಮಾಡಿ ವಿನೂತನ ಕಾರ್ಯಕ್ಕೆ ಸಾಥ್ ನೀಡಿದೆ.
ಕಸ ಹಾಕಿದ ಅಂಗಡಿ ಮಾಲೀಕರಿಗೆ ಚಾಟಿ: ಇದೇ ಸಂದರ್ಭದಲ್ಲಿ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಅವರು ಚಂದ್ರಮೌಳೆಶ್ವರ ರಸ್ತೆ, ಮಹಾವೀರ್ ರಸ್ತೆ, ಬಟ್ಟೆ ಬಜಾರ್, ತರಕಾರಿ ಮಾರುಕಟ್ಟೆ ರಸ್ತೆಯಿಂದ ರೌಂಡ್ ಹಾಕಿದರು. ಈ ವೇಳೆ ರಸ್ತೆಗಳ ವೀಕ್ಷಣೆ ಮಾಡುವಾಗ ಬಟ್ಟೆ ಅಂಗಡಿಯೊಂದರ ಮುಂದೆ ಕಸದ ರಾಶಿ ಹಾಕಿದ್ದನ್ನು ಕಂಡು ರಸ್ತೆ ಮಧ್ಯೆ ಕಸ ಎಸೆಯುವುದು ಸರಿಯೇ? ಸ್ವಚ್ಛತೆ ಕಾಪಾಡುವುದು ನಿಮ್ಮ ಕರ್ತವ್ಯ ಎಂದು ತಿಳಿಹೇಳಿ ಬಿಸಿ ಮುಟ್ಟಿಸಿದರು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಬೈಕ್ ಸವಾರರನ್ನು ಹಿಡಿದ ತಕ್ಷಣ ಗಾಬರಿಗೊಳಗಾಗಿ ಅವಕ್ಕಾಗಿದ್ದಾರೆ. ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.