ರಾಯಚೂರು: ಮನೆಯ ಹಿಂದಿನ ಕಿಟಕಿ ಒಡೆದು ಒಳನುಗ್ಗಿ ಮನೆಯಲ್ಲಿದ್ದ ಬಂಗಾರ, ಬೆಳ್ಳಿಯ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಕಳ್ಳನ ಸೆರೆ ಹಿಡಿಯುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
ನ. 26ರಂದು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಗ್ರಾಮದ ಶರಣಬಸವ ಎನ್ನುವವರ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರು ಮನೆಯ ಹಿಂದಿನ ಕಿಟಕಿ ಒಡೆದು ಒಳನುಗ್ಗಿ ಮನೆಯಲ್ಲಿದ್ದ ಬಂಗಾರ, ಬೆಳ್ಳಿಯ ಆಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕ ಶರಣಬಸವ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಕಳ್ಳರ ಪತ್ತೆಗೆ ಎಸ್ಪಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿಬಾಬು ಮತ್ತು ಇತರೆ ಅಧಿಕಾರಗಳ ವಿಶೇಷ ತಂಡ ರಚಿಸಿದ್ದರು. ಇದೀಗ ಪಿಎಸ್ಐ ರಾಘವೇಂದ್ರ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿ ಕಳ್ಳನನ್ನ ಸೆರೆ ಹಿಡಿದಿದ್ದಾರೆ.
ಬಂಧಿತ ಆರೋಪಿ ಪಗಡದಿನ್ನಿ ಗ್ರಾಮದ ರಮೇಶ ಮಡಿವಾಳ ಎಂಬಾತ ತಾನೇ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 5.25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಶೇಷ ತಂಡದ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.