ರಾಯಚೂರು : ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಚುನಾವಣೆ ತಯಾರಿ ಭರ್ಜರಿಯಾಗಿ ನಡೆದಿದೆ. ಈ ನಡುವೆ ರಾಯಚೂರು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿನ ಮತದಾರರ ಸಂಖ್ಯೆ ಹೆಚ್ಚಳವಾಗಿದೆ.
ಕಳೆದ ಐದು ವರ್ಷಗಳಲ್ಲಿ ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಶೇ.12ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯ ಕವಿತಾಳ, ಸಿರವಾರ, ಮಸ್ಕಿ, ಬಳಗಾನೂರ, ತುರುವಿಹಾಳ ಹಾಗೂ ಹಟ್ಟಿ ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ ಪಂಚಾಯತ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಇದರ ಪರಿಣಾಮ ಗ್ರಾಮ ಪಂಚಾಯತ್ ಮರುವಿಂಗಡನೆಯಿಂದ ನೂತನ ಗ್ರಾಮ ಪಂಚಾಯತ್‌ಗಳು ಆಸ್ತಿತ್ವಕ್ಕೆ ಬಂದಿವೆ. ಇದರಲ್ಲಿ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಹೀಗಾಗಿ ಕೆಲವು ಕಡೆ ಚುನಾವಣೆ ನಡೆಯುತ್ತಿಲ್ಲ. ಸದ್ಯ ಜಿಲ್ಲೆಯ ಒಟ್ಟು 176 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸುವುದಕ್ಕೆ ಚುನಾವಣೆ ಆಯೋಗವು ದಿನಾಂಕ ನಿಗದಿ ಪಡಿಸಿದೆ.
ಇದನ್ನು ಓದಿ-ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ ಘೋಷಣೆ: ಏನು ಹೇಳುತ್ತದೆ ನೀತಿ ಸಂಹಿತೆ?
ಸಿರವಾರ ಮತ್ತು ಕವಿತಾಳ ನೂತನ ತಾಲೂಕುಗಳ ಉದಯಿಸಿರುವುದರಿಂದ ಹಳೇ ತಾಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‌ಗಳ ಸಂಖ್ಯೆ ಇಳಿಮುಖವಾಗಿದೆ. ಆದ್ರೆ, ರಾಯಚೂರು ತಾಲೂಕು ವ್ಯಾಪ್ತಿಗೆ ಬರುವ 31 ಗ್ರಾಮ ಪಂಚಾಯತ್‌ಗಳಿಗೆ ಮೊದಲು ಚುನಾವಣೆ ನಡೆದಿತ್ತು.
ಈಗ 34 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯುತ್ತಿದೆ. ರಾಯಚೂರು ತಾಲೂಕಿನಲ್ಲಿ ಮಾತ್ರ ಗ್ರಾಮ ಪಂಚಾಯತ್‌ಗಳ ಸಂಖ್ಯೆ ಏರಿಕೆಯಾಗಿದೆ. ಸಿಂಧನೂರು ತಾಲೂಕಿನ ವ್ಯಾಪ್ತಿಯಲ್ಲಿ 35 ಗ್ರಾಮ ಪಂಚಾಯತ್‌ಗಳಿದ್ದು, ಐದು ಮಸ್ಕಿ ತಾಲೂಕು ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ 39 ಗ್ರಾಮ ಪಂಚಾಯತ್‌ಗಳ ಪೈಕಿ 10 ಗ್ರಾಮ ಪಂಚಾಯತ್‌ಗಳು ನೂತನ ತಾಲೂಕಿಗೆ ಸೇರ್ಪಡೆಯಾಗಿವೆ.
ಮಾನ್ವಿ ತಾಲೂಕಿನ 38 ಗ್ರಾಮ ಪಂಚಾಯತ್‌ಗಳಿದ್ದು, ಹೊಸ ತಾಲೂಕುಗಳಿಗೆ 21 ಗ್ರಾಮ ಪಂಚಾಯತ್‌ಗಳು ಬಿಟ್ಟುಹೋಗಿವೆ. ಸಿರವಾರ ತಾಲೂಕು ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯತ್‌ಗಳು ಹಾಗೂ ಮಸ್ಕಿ ತಾಲೂಕಿನ ವ್ಯಾಪ್ತಿಯೊಳಗೆ 21 ಗ್ರಾಮ ಪಂಚಾಯತ್‌ಗಳು ಬರುತ್ತಿವೆ.
ಕಳೆದ 2015ರ ಮೇ ತಿಂಗಳಲ್ಲಿ ನಡೆದ 174 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆದಾಗ ಒಟ್ಟು 10,08,318 ಮತದಾರರಿದ್ದರು. ಇದರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಸ್ವಲ್ಪ ಅಧಿಕವಾಗಿತ್ತು. ಪುರುಷ ಮತದಾರರು 5,02,524 ರಷ್ಟಿದ್ರೆ, ಮಹಿಳಾ ಮತದಾರರು 5,05,638 ಇದ್ದರು. ಐದು ವರ್ಷಗಳಲ್ಲಿ ಬಳಿಕ ಮತದಾರರ ಸಂಖ್ಯೆ 1,19,798 (ಶೇ 11.88) ರಷ್ಟು ಹೆಚ್ಚಳವಾಗಿದ್ದು, ಇದರಲ್ಲಿಯೂ ಸಹ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.