ರಾಯಚೂರು: ಕೃಷಿ ಕೆಲಸಕ್ಕೆ ಬಾಲಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ 59 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಹೊರವಲಯದಲ್ಲಿ ಸಿರವಾರ ಕ್ರಾಸ್ ಹಾಗೂ ಕೊಪ್ಪರ ಕ್ರಾಸ್, ನರಗುಂಡ ಕ್ರಾಸ್, ಜಾಲಹಳ್ಳಿ ಕ್ರಾಸ್ ಬಳಿ ಹಠಾತ್ ದಾಳಿ ನಡೆಸಿ 59 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕೃಷಿ ಚಟುವಟಿಕೆಗೆ ಬಳಸಿಕೊಳ್ಳುವ ಉದ್ದೇಶದಿಂದ ಮಕ್ಕಳನ್ನು ಗೂಡ್ಸ್ ವಾಹನಗಳಲ್ಲಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು.
ಕಾನೂನು ಬಾಹಿರವಾಗಿ ಬಾಲಕಾರ್ಮಿಕರನ್ನು ಸಾಗಣಿಕೆ ಮಾಡುತ್ತಿದ್ದ 10 ವಾಹನಗಳ ಜಪ್ತಿ ಮಾಡಿ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತ್ತೆಯಾಗಿರುವ ಬಾಲಕಾರ್ಮಿರು ದೇವದುರ್ಗ ತಾಲೂಕಿನ ಹೊಸೂರು, ಸಿದ್ದಾಪುರ, ಜಾಲಹಳ್ಳಿ, ಭೂಮನಗೌಡ, ಗಲಗ, ಬೆಂಚಮರಡಿ, ಕೆ. ಇರಬಗೇರಾ, ಮುಂಡರಗಿ ಹಾಗೂ ದೇವದುರ್ಗ ಪಟ್ಟಣದವರಾಗಿದ್ದಾರೆ.
ರಕ್ಷಿಸಲಾಗಿರುವ 59 ಬಾಲಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿಗಳಿಗೆ ಹಸ್ತಾಂತರಿಸಲಾಗಿದೆ. ದಾಳಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಜಿಲ್ಲಾ ಬಾಲಕಾರ್ಮಿಕರ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.